ಬೆಂಗಳೂರು: ಹೊರಗುತ್ತಿಗೆ ಸೇವೆಯನ್ನು ಹಂತಹಂತವಾಗಿ ಬಂದ್ ಮಾಡುವ ಮೊದಲ ಹೆಜ್ಜೆಯಾಗಿ ಇಂಧನ ಇಲಾಖೆಯ 3200ಕ್ಕೂ ಹೆಚ್ಚು ಸಿಬ್ಬಂದಿಗೆ ಕಾಯಂ ಹುದ್ದೆ ನೀಡಲಾಗುವುದು.
ಇಂಧನ ಇಲಾಖೆಯ ಸ್ಟೇಷನ್ ಆಪರೇಟರ್, ಸ್ಟೇಷನ್ ಸಹಾಯಕರು, ಗ್ಯಾಂಗ್ ಮನ್, ಮೀಟರ್ ರೀಡರ್ ಮತ್ತು ಚಾಲಕರಿಗೆ ಸೇವಾ ಭದ್ರತೆ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಹಣಕಾಸು ಇಲಾಖೆಯ ಅನುಮತಿ ಪಡೆಯುವ ಪ್ರಕ್ರಿಯೆ ನಡೆದಿದೆ.
ಸುಪ್ರೀಂಕೋರ್ಟ್ ಆದೇಶದಂತೆ 2028ರೊಳಗೆ ಹೊರಗುತ್ತಿಗೆ ಸೇವೆ ನಿಲ್ಲಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಈ ಬಗ್ಗೆ ರಚಿಸಿದ್ದ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿಗಳ ಬಗ್ಗೆ ಚರ್ಚೆ ನಡೆಸಿದ್ದ ಕ್ಯಾಬಿನೆಟ್ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿತ್ತು. ಅಪಾಯಕಾರಿ ಕೆಲಸ ನಿರ್ವಹಿಸುವ ಪಟ್ಟಿಯಲ್ಲಿ ಮೊದಲಿರುವ ಇಂಧನ ಇಲಾಖೆಯ 3200ಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿಗೆ ಸೇವಾ ಭದ್ರತೆ ಕಲ್ಪಿಸಲು ಆದ್ಯತೆ ನೀಡಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ 3 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಖಾಸಗಿ ಏಜೆನ್ಸಿಗಳಿಂದ ಭರ್ತಿ ಮಾಡಲಾಗಿದ್ದು, ಇದರಿಂದ ಪ್ರತಿಭಾವಂತರಿಗೆ ಅನ್ಯಾಯದ ಜೊತೆಗೆ ಮೀಸಲು ಉಲ್ಲಂಘನೆ ಆಗುತ್ತಿದೆ. ಏಜೆನ್ಸಿಗಳಿಂದ ನೌಕರರ ಶೋಷಣೆ ಕೂಡ ನಡೆಯುತ್ತಿದೆ. ಹೀಗಾಗಿ 2028 ರೊಳಗೆ ಎಲ್ಲಾ ಹೊರಗುತ್ತಿಗೆ ನೇಮಕ ನಿಲ್ಲಿಸಬೇಕು ಎಂದು ಸಂಪುಟ ಉಪ ಸಮಿತಿ ಶಿಫಾರಸು ಮಾಡಿತ್ತು.
ಇಂಧನ, ಗಣಿ, ಆರೋಗ್ಯ ಇಲಾಖೆ, ಪೌರಕಾರ್ಮಿಕರಿಗೆ ಆದ್ಯತೆ ಮೇಲೆ ಸೇವಾ ಭದ್ರತೆ ಕಲ್ಪಿಸಲು ಸರ್ಕಾರ ಬಯಸಿದೆ. ಮೊದಲ ಹಂತದಲ್ಲಿ ಕೆಪಿಟಿಸಿಎಲ್ ಮತ್ತು ಎಸ್ಕಾಂ ಗಳ ನೌಕರರನ್ನು ಪರಿಗಣಿಸಲಾಗುವುದು. ಹಣಕಾಸು ಇಲಾಖೆ ಸಮ್ಮತಿ ಬಳಿಕ ಈ ಪ್ರಕ್ರಿಯೆ ನಡೆಯಲಿದೆ.
ಸರ್ಕಾರದ ಕಚೇರಿಗಳ ಆಡಳಿತ ಮತ್ತು ನಿರ್ವಹಣೆಗೆ ತೊಂದರೆಯಾಗದಂತೆ ಹೊರಗುತ್ತಿಗೆ ಸೇವೆ ಮುಂದುವರೆಸಲು ಕಾನೂನು ರೂಪಿಸುವ ಪ್ರಕ್ರಿಯೆ ಕೂಡ ನಡೆದಿದೆ. ಇದಕ್ಕಾಗಿ ಕರ್ನಾಟಕ ಹೊರಗುತ್ತಿಗೆ ನೌಕರರ ನಿಯಂತ್ರಣ, ನೇಮಕ ಕಲ್ಯಾಣ ವಿಧೇಯಕ ರೂಪಿಸಲಾಗುತ್ತಿದೆ. 2028ರೊಳಗೆ ಹೊರಗುತ್ತಿಗೆ ಸೇವೆಯನ್ನು ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

