ಬೆಂಗಳೂರು: ನಮ್ಮ ಮೆಟ್ರೋ ಎಲೆಕ್ಟ್ರಾನಿಕ್ ಸಿಟಿ ಹಳದಿ ಮಾರ್ಗಕ್ಕೆ ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ. ಮೆಟ್ರೋ ರೈಲು ನಿಗಮ ಸೋಮವಾರ 13ನೇ ಹೊಸ ರೈಲು ಬರಮಾಡಿಕೊಂಡಿದೆ.
ಹೆಬ್ಬಗೋಡಿ ಡಿಪೋಗೆ 13ನೇ ರೈಲು ಆಗಮಿಸಿದ್ದು, 750 ಕಿಲೋಮೀಟರ್ ಟ್ರಯಲ್ ರನ್ ನಡೆಸಲಾಗುವುದು. ಆಗಸ್ಟ್ ವೇಳೆಗೆ ರೈಲುಗಳ ಸೇರ್ಪಡೆ ಪೂರ್ಣವಾಗಲಿದೆ. 6 ಕೋಚ್ ಗಳನ್ನು ಒಳಗೊಂಡ ಹೊಸ ಮೆಟ್ರೋ ರೈಲು ಆಗಮಿಸಿದೆ. ಟ್ರಯಲ್ ರನ್ ಬಳಿಕ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಇದಕ್ಕೂ ಮೊದಲು ಮುಖ್ಯಮಾರ್ಗದಲ್ಲಿ ಸುಮಾರು 750 ಕಿಮೀ ನಷ್ಟು ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಬೇಕಿದೆ. ರಾತ್ರಿ ವೇಳೆಯಲ್ಲಿ ಈ ಪ್ರಕ್ರಿಯೆ ನಡೆಸಲಾಗುವುದು.
ಪ್ರಸ್ತುತ 19.75 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ 10 ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಜನದಟ್ಟಣೆಯ ಸಮಯದಲ್ಲಿ ಪ್ರತಿ 7 ನಿಮಿಷಕ್ಕೆ ಒಮ್ಮೆ ಮೆಟ್ರೋ ಸೌಲಭ್ಯ ಸಿಗುತ್ತಿದೆ. ಇನ್ನುಳಿದ ಎರಡು ರೈಲುಗಳು ಪರೀಕ್ಷಾರ್ಥ ಹಂತದಲ್ಲಿದ್ದು, ಮುಂದಿನ ಕೆಲವೇ ವಾರದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಜುಲೈ ಆರಂಭದ ವೇಳೆಗೆ 14 ಮತ್ತು 15ನೇ ರೈಲುಗಳು ಕೂಡ ಆಗಮಿಸುವ ನಿರೀಕ್ಷೆ ಇದೆ. ಆಗಸ್ಟ್ 11ರಂದು ಹಳದಿ ಮಾರ್ಗದ ಮೊದಲ ವಾರ್ಷಿಕೋತ್ಸವದ ವೇಳೆಗೆ ಎಲ್ಲಾ 15 ರೈಲುಗಳು ಕಾರ್ಯಾಚರಣೆಗೆ ಸಜ್ಜಾಗಲಿದ್ದು, ಪೀಕ್ ಅವರ್ ನಲ್ಲಿ ಕಾಯುವಿಕೆ ಅವಧಿ ಐದು ನಿಮಿಷ ಅಥವಾ ಅದಕ್ಕಿಂತಲೂ ಕಡಿಮೆಯಾಗಲಿದೆ. ಎರಡು ರೈಲುಗಳನ್ನು ತುರ್ತು ಪರಿಸ್ಥಿತಿ ನಿಭಾಯಿಸಲು ರಿಸರ್ವ್ ಸ್ಟಾಕ್ ಆಗಿ ಇರಿಸಲಾಗುವುದು ಎನ್ನಲಾಗಿದೆ.

