ಬೆಂಗಳೂರು: ಇಂದಿನಿಂದ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗದಲ್ಲಿ 6ನೇ ರೈಲು ಸಂಚರಿಸಲಿದೆ. ಇದರಿಂದ ರೈಲುಗಳ ಸಂಚಾರದ ಅಂತರ 15 ನಿಮಿಷದಿಂದ 13 ನಿಮಿಷಕ್ಕೆ ಇಳಿಕೆಯಾಗಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಇದುವರೆಗೆ ಹಳದಿ ಮಾರ್ಗದಲ್ಲಿ ಕೇವಲ ಐದು ರೈಲುಗಳು ಕಾರ್ಯನಿರ್ವಹಿಸುತ್ತಿದ್ದವು. ಇದರಿಂದ ಬೆಳಗ್ಗೆ ಮತ್ತು ಸಂಜೆ ಪೀಕ್ ಅವಧಿಯಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ರೈಲು ಸಂಚಾರ ಇತ್ತು. ಇದೀಗ ಆರನೇ ರೈಲು ಸೇರ್ಪಡೆಯಾಗುತ್ತಿದ್ದು, 13 ನಿಮಿಷಕ್ಕೊಂದು ರೈಲು ಸಂಚರಿಸಲಿದೆ.
ಭಾನುವಾರ ಪೀಕ್ ಅವಧಿಯ ಸೇವೆ ಮಾಮೂಲಿಯಂತೆ 15 ನಿಮಿಷಗಳ ಅಂತರದಲ್ಲಿ ಮುಂದುವರೆಯಲಿದೆ. ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್ ಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಮ್ಮ ಮೆಟ್ರೋ ರೈಲು ನಿಗಮ ತಿಳಿಸಿದೆ.
ಏಳನೇ ರೈಲು ಸೆಟ್ ಈಗಾಗಲೇ ಬೆಂಗಳೂರು ತಲುಪಿದ್ದು, ಜನವರಿಯಲ್ಲಿ ವಾಣಿಜ್ಯ ಸಂಚಾರಕ್ಕೆ ಲಭ್ಯವಾಗುವ ಸಾಧ್ಯತೆ ಇದೆ. ಈ ರೈಲು ಕಾರ್ಯಾಚರಣೆಗೆ ಇಳಿದಲ್ಲಿ ರೈಲುಗಳ ಅಂತರ ಎಂಟರಿಂದ ಹತ್ತು ನಿಮಿಷಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ.


