ನವದೆಹಲಿ/ಗುವಾಹಟಿ : ದೇಶದ ಕೋಟ್ಯಂತರ ರೈತರು ಕಾತರದಿಂದ ಕಾಯುತ್ತಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ ಹಣ ಇಂದು (ಮಾರ್ಚ್ 13, ಶುಕ್ರವಾರ) ಬಿಡುಗಡೆಯಾಗಲಿದೆ. ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ 5 ಗಂಟೆಗೆ ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಲಿದ್ದಾರೆ.
ರೈತರ ಮೊಬೈಲ್‌ಗೆ ಬಂದ ಸಂದೇಶದಲ್ಲೇನಿದೆ ?
ಹಣ ಬಿಡುಗಡೆಗೂ ಮುನ್ನ ಕೇಂದ್ರ ಕೃಷಿ ಸಚಿವಾಲಯವು ಫಲಾನುಭವಿ ರೈತರ ಮೊಬೈಲ್‌ಗಳಿಗೆ ಎಸ್‌ಎಂಎಸ್ (SMS) ಕಳುಹಿಸುತ್ತಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಹೆಸರಿನಲ್ಲಿ ಬರುತ್ತಿರುವ ಈ ಸಂದೇಶದಲ್ಲಿ ಹೀಗಿದೆ:
“ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 13ರ ಸಂಜೆ 5 ಗಂಟೆಗೆ ಅಸ್ಸಾಂನ ಗುವಾಹಟಿಯಿಂದ ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. https://pmindiawebcast.nic.in/ ಲಿಂಕ್ ಮೂಲಕ ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಿಮ್ಮೆಲ್ಲರಿಗೂ ಆದರದ ಸುಸ್ವಾಗತ.”
ಈ ಲಿಂಕ್ ಮೂಲಕ ಪ್ರಧಾನಿ ಮೋದಿ ಅವರು ದೇಶದ ವಿವಿಧ ಭಾಗದ ರೈತರೊಂದಿಗೆ ವರ್ಚುವಲ್ ಆಗಿ ಸಂವಹನ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
9.32 ಕೋಟಿ ರೈತರಿಗೆ ಲಾಭ: ಈ ಬಾರಿ ಒಟ್ಟು 9.32 ಕೋಟಿ ರೈತ ಕುಟುಂಬಗಳಿಗೆ 18,640 ಕೋಟಿ ರೂ. ಹಣವನ್ನು ವಿತರಿಸಲಾಗುತ್ತಿದೆ. ಪ್ರತಿಯೊಬ್ಬ ರೈತರ ಖಾತೆಗೆ 2,000 ರೂ. ಜಮೆಯಾಗಲಿದೆ.
2.15 ಕೋಟಿ ಮಹಿಳಾ ರೈತರು: ಈ ಯೋಜನೆಯಡಿ ದೇಶಾದ್ಯಂತ 2.15 ಕೋಟಿ ಮಹಿಳಾ ರೈತರು ಆರ್ಥಿಕ ನೆರವು ಪಡೆಯುತ್ತಿದ್ದಾರೆ.
ವಿಳಂಬಕ್ಕೆ ಕಾರಣ: ಪ್ರತಿ ವರ್ಷ ಫೆಬ್ರವರಿಯಲ್ಲಿ ಬರಬೇಕಿದ್ದ ಮೊದಲ ಕಂತು ಈ ಬಾರಿ ಮಾರ್ಚ್‌ಗೆ ವಿಳಂಬವಾಗಿದೆ. ಫಲಾನುಭವಿಗಳ ಮರು-ಪರಿಶೀಲನೆ (Re-verification) ಪ್ರಕ್ರಿಯೆಯಿಂದಾಗಿ ಈ ವಿಳಂಬ ಉಂಟಾಗಿದೆ ಎಂದು ಕೇಂದ್ರ ತಿಳಿಸಿದೆ.
ಅನರ್ಹರ ಪಟ್ಟಿ ಔಟ್: ಈ ಪ್ರಕ್ರಿಯೆಯಲ್ಲಿ ಸುಮಾರು 1.30 ಲಕ್ಷ ಅನರ್ಹರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ನಿಮ್ಮ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಸರಳ ಹಂತಗಳನ್ನು ಅನುಸರಿಸಿ:
- ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ ‘Know Your Status’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
- ‘Get Data’ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಕಂತಿನ ಸ್ಥಿತಿ (Status) ಪರದೆಯ ಮೇಲೆ ಕಾಣಿಸುತ್ತದೆ.
ಹಣ ಬರದಿದ್ದರೆ ಏನು ಮಾಡಬೇಕು ?
ಒಂದು ವೇಳೆ ನಿಮಗೆ ಮೆಸೇಜ್ ಬಂದಿಲ್ಲ ಅಥವಾ ಸ್ಟೇಟಸ್‌ನಲ್ಲಿ ಸಮಸ್ಯೆ ಇದ್ದರೆ, ಈ ಕೆಳಗಿನವುಗಳನ್ನು ಪರಿಶೀಲಿಸಿ:
- ಆಧಾರ್ ಸೀಡಿಂಗ್: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿ.
- ಇ-ಕೆವೈಸಿ: ನಿಮ್ಮ ಇ-ಕೆವೈಸಿ ಅಪ್‌ಡೇಟ್ ಆಗಿದೆಯೇ ಎಂದು ಪೋರ್ಟಲ್‌ನಲ್ಲಿ ನೋಡಿ.
- ಸಹಾಯವಾಣಿ: ಯಾವುದೇ ತಾಂತ್ರಿಕ ತೊಂದರೆಗಳಿದ್ದರೆ ಪಿಎಂ ಕಿಸಾನ್ ಹೆಲ್ಪ್‌ಲೈನ್ ಸಂಖ್ಯೆ 155261 ಅಥವಾ 1800115526 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

