ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಖಾತೆದಾರರಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಿದೆ. ವರ್ಷಗಳಿಂದ ಕ್ಲೈಮ್ ಮಾಡದೆಯೇ ಸ್ಥಗಿತಗೊಂಡಿರುವ (Inactive) ಪಿಎಫ್ ಖಾತೆಗಳಲ್ಲಿನ ಹಣವನ್ನು ಸ್ವಯಂಚಾಲಿತವಾಗಿ (Automatically) ಇತ್ಯರ್ಥಪಡಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಇಪಿಎಫ್‌ಒ ಯೋಜಿಸುತ್ತಿದೆ.
ತಮ್ಮ ಹಳೆಯ ಕಂಪನಿಯ ಪಿಎಫ್ (PF) ಹಣವನ್ನು ಪಡೆಯಲು ವರ್ಷಗಟ್ಟಲೆ ಕಾಯುತ್ತಿದ್ದ ಅಥವಾ ಮರೆತುಹೋಗಿದ್ದ ಲಕ್ಷಾಂತರ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಮತ್ತು ಇಪಿಎಫ್‌ಒ (EPFO) ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಕ್ಲೈಮ್ ಮಾಡದೆಯೇ ಸ್ಥಗಿತಗೊಂಡಿರುವ (Inactive) ಪಿಎಫ್ ಖಾತೆಗಳಲ್ಲಿನ ಸಾವಿರಾರು ಕೋಟಿ ರೂಪಾಯಿಗಳನ್ನು ನೇರವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಕ್ರಾಂತಿಕಾರಿ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.
ನೇರ ನಗದು ವರ್ಗಾವಣೆ: ಈ ವಿಧಾನ ಜಾರಿಗೆ ಬಂದರೆ, ಖಾತೆದಾರರು ಯಾವುದೇ ಅರ್ಜಿ ಸಲ್ಲಿಸುವ ಅಗತ್ಯವಿಲ್ಲದೆ, ಅವರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ.
ಮೊದಲ ಹಂತದ ಗುರಿ : ವರದಿಗಳ ಪ್ರಕಾರ, ಮೊದಲ ಹಂತದಲ್ಲಿ ಸುಮಾರು 8 ಲಕ್ಷಸ್ಥಗಿತಗೊಂಡ ಖಾತೆಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿರುವ ₹5,200 ಕೋಟಿ ಹಣವನ್ನು ಪ್ರಕ್ರಿಯೆಗೊಳಿಸಲಾಗುವುದು.
ದೊಡ್ಡ ಮೊತ್ತದ ಖಾತೆಗಳು: ಈ ಪೈಕಿ 14,000 ಖಾತೆಗಳಲ್ಲಿ ₹5 ಲಕ್ಷಕ್ಕೂ ಅಧಿಕ ಬ್ಯಾಲೆನ್ಸ್ ಇದೆ ಎಂದು ತಿಳಿದುಬಂದಿದೆ. ಸದ್ಯ ದೇಶಾದ್ಯಂತ ಸುಮಾರು 31 ಲಕ್ಷ ಖಾತೆಗಳಲ್ಲಿ ₹10,181 ಕೋಟಿ ಹಣ ಬಳಕೆಯಾಗದೆ ಉಳಿದಿದೆ.
ಖಾತೆ ಯಾವಾಗ ‘ಇನ್‌ಆಕ್ಟಿವ್’ ಆಗುತ್ತದೆ?
ಸಾಮಾನ್ಯವಾಗಿ ಒಬ್ಬ ಉದ್ಯೋಗಿ 55 ವರ್ಷ ವಯಸ್ಸಿನಲ್ಲಿ ನಿವೃತ್ತರಾಗಿ, ಸತತ ಮೂರು ವರ್ಷಗಳ ಕಾಲ ಯಾವುದೇ ವಂತಿಗೆ (Contribution) ಪಾವತಿಸದಿದ್ದರೆ ಆ ಖಾತೆಯನ್ನು ‘ಇನ್‌ಆಕ್ಟಿವ್‘ ಎಂದು ಪರಿಗಣಿಸಲಾಗುತ್ತದೆ. ಅಂದಿನಿಂದ ಆ ಹಣದ ಮೇಲಿನ ಬಡ್ಡಿ ಜಮೆಯಾಗುವುದು ನಿಲ್ಲುತ್ತದೆ.
ಈಗಾಗಲೇ ₹1,000 ಕ್ಕಿಂತ ಕಡಿಮೆ ಬ್ಯಾಲೆನ್ಸ್ ಇರುವ ಖಾತೆಗಳ ಆಟೋಮ್ಯಾಟಿಕ್ ಸೆಟಲ್ಮೆಂಟ್‌ಗೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಅನುಮೋದನೆ ನೀಡಿದ್ದು, ಈಗ ದೊಡ್ಡ ಮೊತ್ತದ ಹಣಕ್ಕೂ ಈ ಸೌಲಭ್ಯ ವಿಸ್ತರಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಸಂಸ್ಥೆಯು 2025-26ರ ಹಣಕಾಸು ವರ್ಷಕ್ಕೆ ಪಿಎಫ್ ಠೇವಣಿಗಳ ಮೇಲೆ 8.25% ಬಡ್ಡಿ ದರವನ್ನು ಈಗಾಗಲೇ ಖಚಿತಪಡಿಸಿದೆ.

