ಬೆಂಗಳೂರು: ರಾಜ್ಯದಲ್ಲಿ 2400 ಚದರಡಿ ನಿವೇಶನದಲ್ಲಿ ಶೇ. 20ರಷ್ಟು ಹೆಚ್ಚುವರಿ ವ್ಯತ್ಯಾಸದೊಂದಿಗೆ ನಿರ್ಮಿಸಿದ ವಸತಿ ಕಟ್ಟಡಗಳಿಗೆ ಓಸಿ, ಸಿಸಿ ಇಲ್ಲದೇ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ನೀಡಿದ್ದ ಗಡುವನ್ನು ಆಗಸ್ಟ್ 15 ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಮೊದಲು 2026 ರ ಮೇ 31ರೊಳಗೆ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ಪ್ರಕರಣಗಳಿಗೆ ಸೀಮಿತವಾಗಿ ಸಿಸಿ, ಓಸಿ ವಿನಾಯಿತಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ನಂತರ ಇದರಿಂದ ಹೆಚ್ಚು ಅನುಕೂಲವಾಗುವುದಿಲ್ಲ ಎನ್ನುವ ಕಾರಣಕ್ಕೆ ಅರ್ಜಿ ಆಹ್ವಾನಿಸಿ ಆದೇಶ ಮಾಡಿದ ನಂತರದ 15 ದಿನಗಳವರೆಗೆ ಈಗಾಗಲೇ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿ ಪೂರ್ಣಗೊಳಿಸಿದ ಪ್ರಕರಣಗಳು ಮತ್ತು ಯಾವುದೇ ವಿದ್ಯುತ್ ಸಂಪರ್ಕ ಪಡೆಯದೆ ಕಟ್ಟಡ ಕಾಮಗಾರಿ ಪೂರ್ಣಗೊಂಡ ಪ್ರಕರಣಗಳಿಗೆ ಅನ್ವಯವಾಗುವಂತೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು.

