ಬೆಂಗಳೂರು: ಬಿಪಿಎಲ್ ಪಡಿತರ ಚೀಟಿದಾರರ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸುವ ಸಂಬಂಧ ಪ್ರಸ್ತಾವನೆ ಸರ್ಕಾರದ ಮುಂದಿದೆ.
ಬಿಪಿಎಲ್ ಕಾರ್ಡ್ ದಾರರ ವಾರ್ಷಿಕ ಆದಾಯ 1.20 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಇದು ಅನೇಕ ವರ್ಷಗಳ ಹಿಂದೆ ನಿಗದಿಪಡಿಸಲಾದ ಮಾನದಂಡವಾಗಿದೆ. ತಿಂಗಳಿಗೆ ಕನಿಷ್ಠ 15,000 ರೂ. ವೇತನ ಪಡೆಯುವ ಸೆಕ್ಯೂರಿಟಿ ಗಾರ್ಡ್ ಗಳು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡುವವರ ವೇತನ ಕೂಡ ಆಹಾರ ಇಲಾಖೆ ನಿಗದಿಪಡಿಸಿರುವ ಮಿತಿಯನ್ನು ಮೀರುತ್ತದೆ.
ಹೀಗಿರುವಾಗ ಇಂತಹ ಹಳೆಯ ಮಾನದಂಡ ಅನುಸರಿಸಿ ಬಿಪಿಎಲ್ ಕಾರ್ಡ್ ಗಳನ್ನು ಪರಿಶೀಲಿಸಿದರೆ ಪ್ರಸ್ತುತ ಚಾಲ್ತಿಯಲ್ಲಿರುವ 1.24 ಕೋಟಿ ಬಿಪಿಎಲ್ ಕಾರ್ಡುಗಳು ಕೂಡ ರದ್ದಾಗಬೇಕಾಗುತ್ತದೆ. ಹೀಗಾಗಿ ವಾರ್ಷಿಕ ಆದಾಯದ ಮಾನದಂಡದಲ್ಲಿ ಪರಿಷ್ಕರಣೆ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಹೀಗಾಗಿ ವಾರ್ಷಿಕ ಆದಾಯ ಮಿತಿ ಹೆಚ್ಚಿಸಲು ಆಹಾರ ಇಲಾಖೆ ನಿರ್ಧರಿಸಿದ್ದು, ಈ ಕುರಿತಾದ ಪ್ರಸ್ತಾವನೆ ಸರ್ಕಾರದ ಮುಂದಿದೆ. ಹಲವು ಇಲಾಖೆಗಳೊಂದಿಗೆ ಸಭೆ ನಡೆಸಿದ ಬಳಿಕ ಬಿಪಿಎಲ್ ಕಾರ್ಡ್ ದಾರರ ವಾರ್ಷಿಕ ಆದಾಯದ ಮಿತಿ ಕುರಿತು ನಿರ್ಧರಿಸಲಾಗುವುದು ಎಂದು ಹೇಳಲಾಗಿದೆ.

