ಬೆಂಗಳೂರು: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ -ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ(ABPMJAY – CM’s ArK) ಯೋಜನೆಯಡಿಯಲ್ಲಿ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ(ART) ಕಾರ್ಯವಿಧಾನಗಳನ್ನು ಸೇರಿಸುವ ಕುರಿತು ಸರ್ಕಾರದ ಆದೇಶ ಹೊರಡಿಸಿದೆ.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಮಕ್ಕಳಾಗದ ದಂಪತಿಗೆ ಸಂತಾನ ಚಿಕಿತ್ಸೆ ಸೇರ್ಪಡೆ ಮಾಡಲಾಗಿದೆ. ಆರೋಗ್ಯ ಇಲಾಖೆ ವತಿಯಿಂದ ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ಒಂದು ವರ್ಷ ಮಾತ್ರ ಈ ಆದೇಶ ಜಾರಿಯಲ್ಲಿರುತ್ತದೆ. ಈ ಯೋಜನೆಯಡಿ ಬಿಪಿಎಲ್ ಕುಟುಂಬದ 120 ದಂಪತಿಗಳಿಗೆ ಮಾತ್ರ ಚಿಕಿತ್ಸೆಗೆ ಅನುಮೋದನೆ ದೊರೆತಿದೆ.
ಎಆರ್ಟಿ ಮೂಲಕ ದಂಪತಿಗೆ ಸಂತಾನ ಚಿಕಿತ್ಸೆ ನೀಡಲಾಗುವುದು. ಖಾಸಗಿ ವ್ಯವಸ್ಥೆಯಲ್ಲಿ ಈ ಚಿಕಿತ್ಸೆ ದುಬಾರಿಯಾಗಿರುವುದರಿಂದ ಆಯುಷ್ಮಾನ್ ಭಾರತ್ ಯೋಜನೆಯಡಿ ಇದನ್ನು ಸೇರ್ಪಡೆ ಮಾಡಲಾಗಿದೆ. ಐವಿಎಫ್ ಸೇರಿದಂತೆ ವಿವಿಧ ಚಿಕಿತ್ಸಾ ವಿಧಾನಗಳ ಮೂಲಕ ಆಯ್ದ ದಂಪತಿಗೆ ಸಂತಾನ ಚಿಕಿತ್ಸೆ ನೀಡಲಾಗುವುದು. ಜಿಲ್ಲಾಸ್ಪತ್ರೆಗಳು, ವೈದ್ಯಕೀಯ ಕಾಲೇಜು, ಸ್ವಾಯತ್ತ ಆರೋಗ್ಯ ಸಂಸ್ಥೆಗಳು ಮತ್ತು ನೋಂದಾಯಿತ ಆಸ್ಪತ್ರೆಗಳಲ್ಲಿ ಸಂತಾನ ಚಿಕಿತ್ಸೆ ನೀಡಲಾಗುವುದು ಎಂದು ಹೇಳಲಾಗಿದೆ.


