ಫರೀದಾಬಾದ್’ ನಲ್ಲಿ ನಡೆದ ಈ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ.ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ SBI ನ ಶಾಖೆಯೊಂದರಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಒಬ್ಬರ ಲಾಕರ್ ನಾಪತ್ತೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ.
ಏನಿದು ಘಟನೆ ?
ಫರೀದಾಬಾದ್’ನ ಸೆಕ್ಟರ್ 15ರ ಎಸ್ಬಿಐ ಶಾಖೆಯಲ್ಲಿ ಸಿಎ ಆಗಿರುವ ಡಿಸಿ ಗರ್ಗ್ ಎಂಬುವವರು 2014 ರಿಂದ ಲಾಕರ್ ಹೊಂದಿದ್ದರು. ಇತ್ತೀಚೆಗೆ ಅವರ ಪತ್ನಿ ಆಭರಣಗಳನ್ನು ತರಲು ಬ್ಯಾಂಕ್ಗೆ ಹೋದಾಗ, ಬ್ಯಾಂಕ್ ಅಧಿಕಾರಿಗಳು “ನಿಮ್ಮ ಹೆಸರಿನಲ್ಲಿ ಇಲ್ಲಿ ಯಾವುದೇ ಲಾಕರ್ ಇಲ್ಲ” ಎಂದು ಹೇಳಿದ್ದಾರೆ. ಇದನ್ನು ಕೇಳಿ ಬೆಚ್ಚಿಬಿದ್ದ ಮಹಿಳೆ ಅಳುತ್ತಲೇ ಪತಿಗೆ ವಿಷಯ ತಿಳಿಸಿದ್ದಾರೆ.
ಲಾಕರ್ನಲ್ಲಿ ಸುಮಾರು ಒಂದು ಕಾಲು ಕೆಜಿ ಚಿನ್ನ (ಅಂದಾಜು ₹2 ಕೋಟಿ ಮೌಲ್ಯ), 3 ಕೆಜಿ ಬೆಳ್ಳಿ ಮತ್ತು ಇತರ ಪ್ರಮುಖ ದಾಖಲೆಗಳಿದ್ದವು. ಗ್ರಾಹಕರ ಬಳಿ ಇಂದಿಗೂ ಲಾಕರ್ನ ಅಸಲಿ ಕೀ ಇದೆ. ಅಷ್ಟೇ ಅಲ್ಲದೆ, ಕಳೆದ ವರ್ಷವೂ ಅವರ ಖಾತೆಯಿಂದ ಲಾಕರ್ ಬಾಡಿಗೆಯಾಗಿ ₹2,360 ಕಡಿತಗೊಂಡಿದೆ.ಬ್ಯಾಂಕ್ ಅಧಿಕಾರಿಗಳ ಪ್ರಕಾರ, ಅದೇ ಲಾಕರ್ ಸಂಖ್ಯೆಯನ್ನು ಈಗ ವಿಕಾಸ್ ಚೌಹಾಣ್ ಎಂಬ ವ್ಯಕ್ತಿಗೆ ಹಂಚಿಕೆ ಮಾಡಲಾಗಿದೆ.
ಸಂತ್ರಸ್ತ ಗ್ರಾಹಕ ಹೇಳಿದ್ದೇನು.?
ಸಿಎ ಡಿಸಿ ಗರ್ಗ್ ಅವರ ಪ್ರಕಾರ, ಬ್ಯಾಂಕ್ ಅಧಿಕಾರಿಗಳ ಶಾಮೀಲಾಗಿ ಈ ಕೃತ್ಯ ನಡೆದಿದೆ.ಒಂದು ವೇಳೆ ಗ್ರಾಹಕ ಲಾಕರ್ ಒಪ್ಪಿಸಿದ್ದರೆ (Surrender), ಬ್ಯಾಂಕ್ ಕೀ ವಾಪಸ್ ಪಡೆಯಬೇಕಿತ್ತು ಮತ್ತು ಲಿಖಿತ ದಾಖಲೆ ಇರಬೇಕಿತ್ತು. ಅಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಬ್ಯಾಂಕ್ ಸಿಬ್ಬಂದಿಯೇ ಲಾಕರ್ ಒಡೆದು, ಅದರಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು, ನಂತರ ಅದೇ ಲಾಕರ್ ಸಂಖ್ಯೆಗೆ ಡೂಪ್ಲಿಕೇಟ್ ಕೀ ತಯಾರಿಸಿ ಬೇರೆಯವರಿಗೆ ನೀಡಿದ್ದಾರೆ ಎಂಬುದು ಸಂತ್ರಸ್ತರ ಗಂಭೀರ ಆರೋಪವಾಗಿದೆ.
ಈ ಸಂಬಂಧ ಬ್ಯಾಂಕ್ನ ಉನ್ನತ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ದೂರು ನೀಡಲಾಗಿದೆ. 12 ವರ್ಷಗಳ ಹಳೆಯ ಲಾಕರ್ ಏಕಾಏಕಿ ಹೇಗೆ ಮಾಯವಾಯಿತು ಮತ್ತು ಅದರಲ್ಲಿನ ಚಿನ್ನ ಎಲ್ಲಿ ಹೋಯಿತು ಎಂಬುದು ಈಗ ದೊಡ್ಡ ರಹಸ್ಯವಾಗಿದೆ.
ಸಾರ್ವಜನಿರೇ ಎಚ್ಚರ : ಬ್ಯಾಂಕ್ ಲಾಕರ್ ಹೊಂದಿರುವವರು ಕಾಲಕಾಲಕ್ಕೆ ಬ್ಯಾಂಕ್ಗೆ ಭೇಟಿ ನೀಡಿ ಲಾಕರ್ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವುದು ಮತ್ತು ಬ್ಯಾಂಕ್ನಿಂದ ಬರುವ ಸಂದೇಶಗಳನ್ನು ಗಮನಿಸುವುದು ಉತ್ತಮ
ಆರ್ಬಿಐ (RBI) ನಿಯಮಗಳ ಪ್ರಕಾರ ಬ್ಯಾಂಕ್ ಹೊಣೆಗಾರಿಕೆ
- ಶೇ. 100 ರಷ್ಟು ಪರಿಹಾರ: ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯ, ವಂಚನೆ ಅಥವಾ ಬ್ಯಾಂಕ್ನಲ್ಲಿ ಸಂಭವಿಸುವ ಕಳ್ಳತನ/ದರೋಡೆಯಿಂದ ಲಾಕರ್ನಲ್ಲಿರುವ ವಸ್ತುಗಳು ನಾಪತ್ತೆಯಾದರೆ, ಬ್ಯಾಂಕ್ ತನ್ನ ಗ್ರಾಹಕರಿಗೆ ಲಾಕರ್ನ ವಾರ್ಷಿಕ ಬಾಡಿಗೆಯ 100 ಪಟ್ಟು ಹಣವನ್ನು ಪರಿಹಾರವಾಗಿ ನೀಡಬೇಕಾಗುತ್ತದೆ. ಉದಾಹರಣೆಗೆ: ನಿಮ್ಮ ವಾರ್ಷಿಕ ಬಾಡಿಗೆ ₹2,360 ಆಗಿದ್ದರೆ, ಬ್ಯಾಂಕ್ ಅಂದಾಜು ₹2.36 ಲಕ್ಷದವರೆಗೆ ಪರಿಹಾರ ನೀಡಲು ಬಾಧ್ಯಸ್ಥವಾಗಿರುತ್ತದೆ.
- ನೈಸರ್ಗಿಕ ವಿಕೋಪ: ಭೂಕಂಪ ಅಥವಾ ಪ್ರವಾಹದಂತಹ ನೈಸರ್ಗಿಕ ವಿಕೋಪಗಳಿಂದ ಹಾನಿಯಾದರೆ ಬ್ಯಾಂಕ್ ಹೊಣೆಗಾರನಾಗಿರುವುದಿಲ್ಲ. ಆದರೆ, ಬ್ಯಾಂಕ್ ಬೆಂಕಿ ಅವಘಡ ಅಥವಾ ಕಟ್ಟಡ ಕುಸಿತದ ಮುನ್ನೆಚ್ಚರಿಕೆ ವಹಿಸದಿದ್ದರೆ ಪರಿಹಾರ ನೀಡಲೇಬೇಕು.
- ಲಾಕರ್ ಸುರಕ್ಷತೆ: ಬ್ಯಾಂಕ್ ತನ್ನ ಲಾಕರ್ ರೂಮ್ಗೆ ಸಿಸಿಟಿವಿ ಕಣ್ಗಾವಲು ಮತ್ತು ಗರಿಷ್ಠ ಭದ್ರತೆಯನ್ನು ಒದಗಿಸುವುದು ಕಡ್ಡಾಯ.

