ಬೆಂಗಳೂರು: ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಬಂಗಾರದ ಅಭಯ ಸಿಗುತ್ತಲೇ ಇಲ್ಲ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಸತತ ಏರಿಕೆ ಮುಂದುವರಿದಿದ್ದು, ಜುಲೈ 21ರ ಮಂಗಳವಾರವೂ ದರದಲ್ಲಿ ಗಣನೀಯ ಜಿಗಿತ ಕಂಡುಬಂದಿದೆ. ನಿನ್ನೆ ಪ್ರತಿ ಗ್ರಾಂಗೆ 15 ರೂಪಾಯಿ ಹೆಚ್ಚಳ ಕಂಡಿದ್ದ ಬಂಗಾರ, ಇಂದು ಒಂದೇ ದಿನ ಬರೋಬ್ಬರಿ 70 ರೂಪಾಯಿ ಜಂಪ್ ಮಾಡಿದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿಯೇ ಪ್ರತಿ ಗ್ರಾಂ ಚಿನ್ನದ ಬೆಲೆ ಸುಮಾರು 155 ರೂಪಾಯಿಯಷ್ಟು ಏರಿಕೆಯಾಗಿರುವುದು ಗಮನಾರ್ಹ.ಮತ್ತೊಂದೆಡೆ, ನಿನ್ನೆ 5 ರೂಪಾಯಿ ಏರಿಕೆಯಾಗಿದ್ದ ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗದೆ ದೇಶೀಯ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ಬೆಂಗಳೂರು ಸೇರಿದಂತೆ ದೇಶೀಯ ಮಾರುಕಟ್ಟೆಯಲ್ಲಿ ಇಂದಿನ ದರ:
ಜಾಗತಿಕ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೆಚ್ಚಾಗಿದೆ.
24 ಕ್ಯಾರಟ್ ಅಪರಂಜಿ ಚಿನ್ನ: ಪ್ರತಿ 10 ಗ್ರಾಂಗೆ ₹760 ಹೆಚ್ಚಳವಾಗಿದ್ದು, ₹1,44,220 ಕ್ಕೆ ತಲುಪಿದೆ. (1 ಗ್ರಾಂಗೆ ₹14,422)
22 ಕ್ಯಾರಟ್ ಆಭರಣ ಚಿನ್ನ: ಪ್ರತಿ 10 ಗ್ರಾಂಗೆ ₹700 ಏರಿಕೆಯಾಗಿದ್ದು, ₹1,32,200 ರಂತೆ ವಹಿವಾಟು ನಡೆಸುತ್ತಿದೆ. (1 ಗ್ರಾಂಗೆ ₹13,220)
18 ಕ್ಯಾರಟ್ ಚಿನ್ನ: 1 ಗ್ರಾಂಗೆ ₹10,816 ರಷ್ಟಿದೆ.
ಬೆಳ್ಳಿ ದರ: ದೇಶೀಯವಾಗಿ ಬೆಳ್ಳಿ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ₹2.35 ಲಕ್ಷ (100 ಗ್ರಾಂಗೆ ₹23,500 / 1 ಗ್ರಾಂಗೆ ₹235) ರಷ್ಟಿದೆ. ಆದರೆ, ತಮಿಳುನಾಡು ಹಾಗೂ ಕೇರಳದ ಕೆಲಭಾಗಗಳಲ್ಲಿ ಪ್ರತಿ 100 ಗ್ರಾಂ ಬೆಳ್ಳಿ ದರ ₹24,000 ತಲುಪಿದೆ.
ಏರಿಕೆಗೆ ಕಾರಣವೇನು?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತಗ್ಗುತ್ತಿದ್ದಂತೆ, ಅದಕ್ಕೆ ಪ್ರತಿಯಾಗಿ ಬಂಗಾರದ ದರದಲ್ಲಿ ಜಿಗಿತ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ದರ ಪ್ರತಿ ಔನ್ಸ್‌ಗೆ 4,030 ಡಾಲರ್ ಮಟ್ಟಕ್ಕೆ ತಲುಪಿದ್ದರೆ, ಬೆಳ್ಳಿ ದರ 57 ಡಾಲರ್‌ಗೆ ಏರಿಕೆಯಾಗಿದೆ. ಇನ್ನು ಜಾಗತಿಕ ವಹಿವಾಟಿನ ಪರಿಣಾಮವಾಗಿ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ ₹96.45 ರಷ್ಟಿದೆ.ಸಾಲು ಸಾಲು ಹಬ್ಬಗಳ ದಿನಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ ಚಿನ್ನ-ಬೆಳ್ಳಿ ಬೆಲೆಯಲ್ಲಿ ಈ ರೀತಿ ಸತತ ಏರಿಕೆಯಾಗುತ್ತಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ.

