ಬೆಂಗಳೂರು: ಭಾರತೀಯರಿಗೆ ಚಿನ್ನ ಎಂದರೆ ಕೇವಲ ಅಲಂಕಾರದ ವಸ್ತುವಲ್ಲ, ಅದು ಆಪತ್ಕಾಲದ ಬಂಧು ಮತ್ತು ಭವಿಷ್ಯದ ಭದ್ರತೆ. ಆದರೆ ಆಭರಣದ ಅಂಗಡಿಗೆ ಹೋದಾಗ 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 916 ಹಾಲ್‌ಮಾರ್ಕ್ ಎಂಬ ಪದಗಳನ್ನು ಕೇಳಿ ಗೊಂದಲಕ್ಕೀಡಾಗುವುದು ಸಾಮಾನ್ಯ. ನಿಮ್ಮ ಹಣಕ್ಕೆ ಸರಿಯಾದ ಮೌಲ್ಯ ಸಿಗಬೇಕಾದರೆ ಈ ಮಾಹಿತಿ ನಿಮಗಾಗಿ:
ಕ್ಯಾರೆಟ್ (K) ಅಂದರೇನು?
ಚಿನ್ನದ ಶುದ್ಧತೆಯನ್ನು ಅಳೆಯುವ ಮಾನದಂಡವೇ ಕ್ಯಾರೆಟ್. 24 ಭಾಗಗಳಲ್ಲಿ ಎಷ್ಟು ಭಾಗ ಶುದ್ಧ ಚಿನ್ನವಿದೆ ಎಂಬುದನ್ನು ಇದು ತಿಳಿಸುತ್ತದೆ.
24K: 99.9% ಶುದ್ಧ ಚಿನ್ನ (ಯಾವುದೇ ಮಿಶ್ರಣವಿಲ್ಲ)
22K (916): 91.6% ಚಿನ್ನ (ಉಳಿದ 8.4% ತಾಮ್ರ ಅಥವಾ ಸತು)
18K: 75% ಚಿನ್ನ
14K: 58.3% ಚಿನ್ನ
ಯಾವ ಕೆಲಸಕ್ಕೆ ಯಾವ ಚಿನ್ನ ಆರಿಸಿಕೊಳ್ಳಬೇಕು?
24K 99.9% ನಾಣ್ಯಗಳು, ಬಾರ್‌ಗಳು ಮತ್ತು ಡಿಜಿಟಲ್ ಗೋಲ್ಡ್ ಹೂಡಿಕೆಗೆ ಅತ್ಯುತ್ತಮ.
22K / 916 91.6% ಮದುವೆ ಹಾಗೂ ಸಾಂಪ್ರದಾಯಿಕ ಆಭರಣಗಳ ತಯಾರಿಕೆಗೆ ಬೆಸ್ಟ್.
18K 75% ವಜ್ರ (Diamond) ಮತ್ತು ಹರಳುಗಳಿರುವ ಸ್ಟೈಲಿಶ್ ಆಭರಣಗಳಿಗೆ.
14K 58.3%ದೈನಂದಿನ ಬಳಕೆಯ (Daily Wear) ಗಟ್ಟಿಮುಟ್ಟಾದ ಆಭರಣಗಳಿಗೆ.
ಪ್ರಮುಖ ವ್ಯತ್ಯಾಸಗಳು
ಹೂಡಿಕೆಗಾದರೆ 24K ಆರಿಸಿ: ಇದು ಅತ್ಯಂತ ಶುದ್ಧ ರೂಪ. ಆದರೆ ಇದು ತುಂಬಾ ಮೃದುವಾಗಿರುವುದರಿಂದ ಇದರಿಂದ ಆಭರಣ ತಯಾರಿಸಲು ಸಾಧ್ಯವಿಲ್ಲ. ಮರುಮಾರಾಟ ಮೌಲ್ಯ (Resale Value) ಇದರಲ್ಲಿ ಹೆಚ್ಚಿರುತ್ತದೆ.
ಆಭರಣಕ್ಕಾದರೆ 22K (916) ಬೆಸ್ಟ್: ನಾವು ಬಳಸುವ ಹೆಚ್ಚಿನ ಒಡವೆಗಳು 22K ಚಿನ್ನದ್ದೇ ಆಗಿರುತ್ತವೆ. ಚಿನ್ನಕ್ಕೆ ಸ್ವಲ್ಪ ತಾಮ್ರ ಸೇರಿಸುವುದರಿಂದ ಆಭರಣಕ್ಕೆ ಗಟ್ಟಿತನ ಬರುತ್ತದೆ. ಇದನ್ನೇ 916 ಹಾಲ್‌ಮಾರ್ಕ್ ಎಂದು ಕರೆಯಲಾಗುತ್ತದೆ.
ವಜ್ರದ ಒಡವೆಗೆ 18K ಸೂಕ್ತ: ನೀವು ವಜ್ರದ ಉಂಗುರ ಅಥವಾ ಹರಳುಗಳ ಸರ ಖರೀದಿಸುತ್ತಿದ್ದರೆ 18K ಅಥವಾ 14K ಉತ್ತಮ. ಇದರಲ್ಲಿ ಚಿನ್ನದ ಪ್ರಮಾಣ ಕಡಿಮೆ ಇದ್ದರೂ, ಹರಳುಗಳನ್ನು ಭದ್ರವಾಗಿ ಹಿಡಿದಿಡುವ ಶಕ್ತಿ ಇರುತ್ತದೆ.
ಖರೀದಿಸುವ ಮುನ್ನ ಈ 3 ವಿಷಯ ಮರೆಯಬೇಡಿ:
BIS ಹಾಲ್‌ಮಾರ್ಕ್: ನೀವು ಯಾವುದೇ ಕ್ಯಾರೆಟ್ ಚಿನ್ನ ಖರೀದಿಸಿದರೂ ಅದರ ಮೇಲೆ BIS ಹಾಲ್‌ಮಾರ್ಕ್ ಮುದ್ರೆ ಇದೆಯೇ ಎಂದು ಪರಿಶೀಲಿಸಿ. ಇದು ಶುದ್ಧತೆಯ ಗ್ಯಾರಂಟಿ.
ಬಣ್ಣದ ವ್ಯತ್ಯಾಸ: ಕ್ಯಾರೆಟ್ ಕಡಿಮೆಯಾದಂತೆ ಚಿನ್ನದ ಗಾಢ ಹಳದಿ ಬಣ್ಣ ಸ್ವಲ್ಪ ಮಂಕಾಗಬಹುದು. ತಾಮ್ರ ಹೆಚ್ಚಿದ್ದರೆ ಅದು ‘ರೋಸ್ ಗೋಲ್ಡ್’ ಬಣ್ಣಕ್ಕೆ ತಿರುಗುತ್ತದೆ.
ತಯಾರಿಕಾ ಶುಲ್ಕ (Making Charges): ಆಭರಣದ ವಿನ್ಯಾಸಕ್ಕೆ ತಕ್ಕಂತೆ ಮೇಕಿಂಗ್ ಚಾರ್ಜ್ ವ್ಯತ್ಯಾಸವಾಗುತ್ತದೆ, ಇದನ್ನು ಚೌಕಾಸಿ ಮಾಡಲು ಮರೆಯಬೇಡಿ.

