ಐಸಿಸಿ ಟಿ20 ವಿಶ್ವಕಪ್ 2026 ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ನಾಳೆ ಭಾನುವಾರ ( ಮಾರ್ಚ್ 8 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ತೆರೆ ಬೀಳಲಿದೆ.
ಈ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಭಾರತ ಮೂರನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದರೆ, ನ್ಯೂಜಿಲೆಂಡ್ ಚೊಚ್ಚಲ ಟ್ರೋಫಿ ಪಡೆದುಕೊಳ್ಳುವ ಹಂಬಲದಲ್ಲಿದೆ.
ಸೆಮಿಫೈನಲ್ ಪಂದ್ಯಗಳಲ್ಲಿ ಬಲಿಷ್ಟವೆನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾವನ್ನು ಸುಲಭವಾಗಿ ಮಣಿಸಿದ ನ್ಯೂಜಿಲೆಂಡ್ ಒಂದೆಡೆಯಾದರೆ, ಇಂಗ್ಲೆಂಡ್ ವಿರುದ್ಧ ಬೃಹತ್ ಮೊತ್ತ ಕಲೆಹಾಕಿ ಗೆದ್ದ ಭಾರತ ಒಂದೆಡೆ ಇರುವುದು ಕ್ರಿಕೆಟ್ ಪ್ರಿಯರಲ್ಲಿ ರೋಚಕತೆ ಹೆಚ್ಚಿಸಿದೆ.
ಇನ್ನು ಉಭಯ ತಂಡಗಳ ಆಟಗಾರರು ಅಂತಿಮ ಸೆಣಸಾಟಕ್ಕಾಗಿ ತಯಾರಿ ನಡೆಸಿಕೊಳ್ಳುತ್ತಿದ್ದು, ಈ ನಡುವೆ ನ್ಯೂಜಿಲೆಂಡ್ ತಂಡದ ಆಟಗಾರ ಗ್ಲೆನ್ ಫಿಲಿಪ್ಸ್ ಭಾರತದ ವಿರುದ್ಧ ಕಣಕ್ಕಿಳಿಯುವ ಕುರಿತು ಮಾತನಾಡಿ ಬುಮ್ರಾ ಬಗ್ಗೆ ಹೇಳಿಕೆ ನೀಡಿ ಸವಾಲನ್ನು ಹಾಕಿದ್ದಾರೆ.
‘ಬುಮ್ರಾ ಓರ್ವ ಅಪ್ರತಿಮ ಬೌಲರ್. ಆತನಲ್ಲಿ ವ್ಯತಿರಿಕ್ತ ಬೌಲಿಂಗ್ ಕಲೆಯಿದೆ. ಡೆತ್ ಓವರ್‌ಗಳಲ್ಲಿ ವಿಕೆಟ್‌ಗೆ ಹೊಡೆಯುವ ಸಾಮರ್ಥ್ಯ ಆತನಲ್ಲಿದೆ. ಹಾಗೆಯೇ ಆತನೊಬ್ಬ ಮನುಷ್ಯ ಕೂಡ ಹೌದು. ನಮ್ಮ ಹಾಗೆಯೇ ಆತನಿಗೂ ಕೆಟ್ಟ ದಿನ ಬರುತ್ತದೆ. ನಾಳೆ ಆತನ ವಿರುದ್ಧ ನಾವು ಒಳ್ಳೆಯ ದಿನ ಹೊಂದಲಿದ್ದೇವೆ’ ಎಂದು ಗ್ಲೆನ್ ಫಿಲಿಪ್ಸ್ ಹೇಳಿಕೆ ನೀಡಿದ್ದು, ಸವಾಲು ಹಾಕಿದ್ದಾರೆ.

