ಪ್ರಸಿದ್ಧ ನಟಿ ಅಸಿನ್ ತೋಟುಮ್ಕಲ್ ಅವರು ಅಕ್ಟೋಬರ್ 26 ರಂದು ತಮ್ಮ 41ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ದೈನಂದಿನ ಗಡಿಬಿಡಿಯ ಜೀವನದಿಂದ ಕೊಂಚ ಬಿಡುವು ಪಡೆದುಕೊಂಡಿರುವ ಅವರು, ಹವಾಯಿ ದ್ವೀಪದಲ್ಲಿ ಪ್ರಶಾಂತವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಸಣ್ಣ ಸುಳಿವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿರುವ ಅಸಿನ್, ಹವಾಯಿಯನ್ ಭಾಷೆಯಲ್ಲಿ ‘ಹ್ಯಾಪಿ ಬರ್ತ್‌ಡೇ’ ಎಂದು ಬರೆದಿರುವ ವಿಪ್ಡ್ ಕ್ರೀಮ್, ಸ್ಟ್ರಾಬೆರಿ ಹಾಗೂ ನೇರಳೆ ಬಣ್ಣದ ಆರ್ಕಿಡ್ ಹೂವಿನಿಂದ ಅಲಂಕರಿಸಲ್ಪಟ್ಟ ಕೇಕ್ ಪ್ಲೇಟ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. “ಇಲ್ಲಿ ಹವಾಯಿಯಲ್ಲಿ ಹುಟ್ಟುಹಬ್ಬದ ಮುಂಜಾನೆ” ಎಂದು ಈ ಫೋಟೋಗೆ ಅವರು ಶೀರ್ಷಿಕೆ ನೀಡಿದ್ದಾರೆ.
2000ರ ದಶಕದ ಆರಂಭದಲ್ಲಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಅಸಿನ್, 2008 ರಲ್ಲಿ ಆಮೀರ್ ಖಾನ್ ಎದುರು ‘ಗಜಿನಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. 2016 ರಲ್ಲಿ ಮೈಕ್ರೋಮ್ಯಾಕ್ಸ್ ಸಂಸ್ಥೆಯ ಸಹ-ಸಂಸ್ಥಾಪಕ ರಾಹುಲ್ ಶರ್ಮಾ ಅವರನ್ನು ವಿವಾಹವಾದ ನಂತರ ಅವರು ಅಭಿನಯದಿಂದ ದೂರ ಉಳಿದಿದ್ದಾರೆ. ಈ ದಂಪತಿಗೆ ಆರಿನ್ ರೈನ್ ಶರ್ಮಾ ಎಂಬ ಪುತ್ರಿ ಇದ್ದಾಳೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅಸಿನ್ ಬಗ್ಗೆ ಮಾತನಾಡಿದ್ದ ಪತಿ ರಾಹುಲ್ ಶರ್ಮಾ, “ಅಸಿನ್ ನನ್ನ ಜೀವನದ ಅತಿ ದೊಡ್ಡ ಶಕ್ತಿ. ಪ್ರತಿಯೊಂದು ಹಂತದಲ್ಲೂ ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಜೀವನದಲ್ಲಿ ನಮ್ಮನ್ನು ಮೇಲೆತ್ತುವಂತಹ ಜೀವನಸಂಗಾತಿ ಸಿಗುವುದು ಅಪರೂಪ, ಅಂತಹ ವ್ಯಕ್ತಿ ಅಸಿನ್” ಎಂದು ಪ್ರೀತಿಯಿಂದ ನೆನೆದಿದ್ದರು. ಅಸಿನ್ ಕೊನೆಯದಾಗಿ 2015 ರ ‘ಆಲ್ ಈಸ್ ವೆಲ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

