ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ ಬರಲಿದ್ದು, ಬೆಂಗಳೂರು ನಗರದ ಜನರು ಮತದಾನ ಮಾಡಬೇಕಿದೆ. ಬಿಬಿಎಂಪಿಯನ್ನು ಜಿಬಿಎ ಎಂದು ಬದಲಾವಣೆ ಮಾಡಿ ಬೆಂಗಳೂರು ನಗರವನ್ನು 369 ವಾರ್ಡ್, 5 ನಗರಸಭೆಯಾಗಿ ವಿಭಾಗ ಮಾಡಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ 5 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆ–2026 ಸಂಬಂಧಿಸಿದ ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಪಟ್ಟಿಗೆ ದೂರು ಹಾಗೂ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮಾರ್ಚ್ 20ರ ವರೆಗೆ ವಿಸ್ತರಿಸಲಾಗಿದೆ. ನಾಗರಿಕರು ತಮ್ಮ ಹೆಸರುಗಳನ್ನು GBA ವೆಬ್ಸೈಟ್ ನಲ್ಲಿ ಅಥವಾ ಸಂಬಂಧಿತ ವಾರ್ಡ್ ಕಚೇರಿ/ ಮತದಾರರ ನೋಂದಣಾಧಿಕಾರಿ ಕಚೇರಿಯಲ್ಲಿ ಪರಿಶೀಲಿಸಬಹುದು.
ಆನ್ಲೈನ್ ಮೂಲಕ ಚೆಕ್ ಮಾಡಲು ವೆಬ್ಸೈಟ್ಗೆ ಭೇಟಿ ನೀಡಿ https://gba.karnataka.gov.in/electoral2026
ಮತದಾರರ ಪಟ್ಟಿ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರಿದ 5 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆ-2026ರ ಸಂಬಂಧ ವಾರ್ಡ್ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ದಿನಾಂಕ 09.03.2026 ರಂದು ಪ್ರಚುರಪಡಿಸಲಾಗಿದೆ.
ಸದರಿ ಕರಡು ಮತದಾರರ ಪಟ್ಟಿಯ ಪ್ರತಿಯನ್ನು ಎಲ್ಲಾ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಮತ್ತು ವಾರ್ಡ್ ಕಛೇರಿಯಲ್ಲೂ ಮತದಾರರ ವೀಕ್ಷಣೆಗೆ ಲಭ್ಯವಿರುತ್ತದೆ.
ಅಲ್ಲದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಸಹ https://gba.karnataka.gov.in/electoral2026 ಲಭ್ಯವಿರುತ್ತದೆ. Search tool by name option ಅಡಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು.
ಪರಿಷ್ಕೃತ ಕರಡು ಮತದಾರರ ಪಟ್ಟಿಯ ಕುರಿತು ದೂರು ಮತ್ತು ಆಕ್ಷೇಪಣೆಗಳಿದ್ದಲ್ಲಿ, ದಿನಾಂಕ 10.03.2026 ರಿಂದ 16.03.2026 ರವರಗೆ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿತ್ತು.
ಮುಂದುವರೆದು ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಚುರ ಪಡಿಸುವ ಕುರಿತು ಮಾಹಿತಿ ನೀಡಲು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ಕರೆಯಲಾಗಿತ್ತು. ಸದರಿ ಸಭೆಯಲ್ಲಿ ಹಾಜರಿದ್ದ ಪ್ರತಿನಿಧಿಗಳು ದೂರು ಮತ್ತು ಆಕ್ಷೇಪಣೆ ಅವಧಿಯನ್ನು ವಿಸ್ತರಿಸಲು ಒಕ್ಕೊರಲಿನಿಂದ ಮನವಿ ಮಾಡಿದ್ದರ ಮೇರೆಗೆ ಮಾನ್ಯ ರಾಜ್ಯ ಚುನಾವಣಾ ಆಯೋಗಕ್ಕೆ ಅವಧಿಯನ್ನು ವಿಸ್ತರಿಸಲು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಪ್ರಸ್ತಾವನೆಯನ್ನು ಪರಿಗಣಿಸಿದ ಮಾನ್ಯ ಆಯೋಗವು ಸಾರ್ವಜನಿಕರು/ಮತದಾರರಿಗೆ ಅನುಕೂಲ ಕಲ್ಪಿಸುವಲ್ಲಿ ದೂರು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ದಿನಾಂಕ 20.03.2026 ರವರಗೂ ವಿಸ್ತರಿಸಿರುತ್ತದೆ.
ತೇಜಸ್ವಿ ಸೂರ್ಯ ಆಕ್ಷೇಪ: ಜಿಬಿಎ ವಿರುದ್ಧ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. GBA ಪೋರ್ಟಲ್ನಲ್ಲಿ ಹೆಸರಿನ ಮೂಲಕ ಅಥವಾ EPIC ಸಂಖ್ಯೆಯ ಮೂಲಕ ಪರಿಷ್ಕೃತ ಮತದಾರರ ಪಟ್ಟಿ ಪರಿಶೀಲಿಸಲು ಅವಕಾಶ ಒದಗಿಸದೆ ಇರುವುದು ವಿಪರ್ಯಾಸ.
ಕೇಂದ್ರ ಚುನಾವಣಾ ಆಯೋಗದ ಪೋರ್ಟಲ್ ನಲ್ಲಿ EPIC ಸಂಖ್ಯೆ ಮೂಲಕ ಮತದಾರರ ವಿವರಗಳನ್ನು ತಿಳಿದುಕೊಳ್ಳಲು ಅವಕಾಶವಿರುವಾಗ, GBA ಪೋರ್ಟಲ್ ನಲ್ಲಿ ಏಕೆ ಸಾಧ್ಯವಾಗುವುದಿಲ್ಲ? ಎಂಬುದು ಯಕ್ಷಪ್ರಶ್ನೆ.
GBA ವಾರ್ಡ್ ಮರುವಿಂಗಡಣೆಯ ನಂತರ ಜನರಿಗೆ ತಮ್ಮ ವಾರ್ಡ್ ಯಾವುದೆಂದೇ ತಿಳಿಯದೆ ಇರುವಾಗ ಮತದಾರರಲ್ಲಿ ಗೊಂದಲ ಸೃಷ್ಟಿಸುವುದು ಯಾವ ಉದ್ದೇಶಕ್ಕಾಗಿ?. ಇದು ನಾಗರಿಕರ ಮತದಾನದ ಹಕ್ಕು ಕಸಿದುಕೊಳ್ಳುವ ವ್ಯವಸ್ಥಿತ ಸಂಚು ಅಲ್ಲವೇ?. ಭಾರತದ ಟೆಕ್ ಸಿಟಿ ಬೆಂಗಳೂರಿಗೆ ಇಂತಹ ಕಳಪೆ ತಂತ್ರಜ್ಞಾನದ ವ್ಯವಸ್ಥೆ ಬೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.

