ಬೆಂಗಳೂರು: ಕೆಪಿಎಸ್ಸಿಯಲ್ಲಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ ಸಂಬಂಧ ಕೆಪಿಎಸ್ ಸಿ ಕಚೇರಿ ಮೇಲೆ ನಡೆದ ಅಧಿಕಾರಿಗಳ ದಾಳಿ ವೇಳೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಪ್ರಶ್ನೆಪತ್ರಿಕೆ, OMR ಶೀಟ್ ಇಡುವ ಸ್ಟ್ರಾಂಗ್ ರೂಮ್ ನ ಸಿಸಿಟಿವಿ ದೃಶ್ಯಗಳೇ ಡಿಲೀಟ್ ಆಗಿರೋದು ಕಂಡುಬಂದಿದೆ.
ಪರೀಕ್ಷೆ ಪ್ರಾರಂಭ ಆಗುವಾಗ ಸ್ಟ್ರಾಂಗ್ ರೂಮ್ ತೆರೆಯಬೇಕು. ಪ್ರಶ್ನೆಪತ್ರಿಕೆ, OMR ಇಡುವಾಗ ಸಿಸಿಟಿವಿ ಕಣ್ಗಾವಲು ಇಡಬೇಕು. ಆದರೆ ಕಳೆದ 6 ತಿಂಗಳಿನ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿಲ್ಲ ಎನ್ನಲಾಗಿದೆ.
ಪ್ರಶ್ನೆ ಪತ್ರಿಕೆ OMR ಶೀಟ್ ಇಡುವ ಕೊಠಡಿಗೆ ಇಡುವಾಗ ದಿನದ 24 ಗಂಟೆ ಸಿಸಿಟಿವಿ ಕಣ್ಗಾವಲು ಇರಬೇಕು. ಅದರಂತೆ ಕೆಪಿ ಎಸ್ ಸಿಯ ಸ್ಟ್ರಾಂಗ್ ರೂಂ ಅಲ್ಲಿ ಸಿಸಿಟಿವಿ ಕ್ಯಾಮರಾ ಇದೆ. ಆದರೆ ಡೇಟಾ ಡಿಲೀಟ್ ಆಗಿದೆ. ನಿಯಮದ ಪ್ರಕಾರ ಸ್ಟ್ರಾಂಗ್ ರೂಂನ ಸಿಸಿಟಿವಿ ಡೇಟಾವನ್ನು ಪರೀಕ್ಷೆ ಮುಗಿದ ವರ್ಷದ ತನಕ ಇಟ್ಟಿರಬೇಕು. ಯಾವುದೇ ಆರೋಪ ಕೇಳಿಬರದೆ ಇದ್ದರೆ ಡೇಟಾ ಡಿಲೀಟ್ ಮಾಡಬಹುದು. ಆದರೆ 6 ತಿಂಗಳ ಡೇಟಾ ಕೂಡ ಇಲ್ಲಿ ಸಂಗ್ರಹವಾಗಿಲ್ಲ.
ಅಲ್ಲದೇ OMR ಶೀಟ್ಗಳ ಸ್ಕ್ಯಾನ್ ಮಾಡಿರುವ ಹಾರ್ಡ್ ಡಿಸ್ಕ್ ಕೂಡ ನಾಪತ್ತೆಯಾಗಿದೆ. ಪರೀಕ್ಷೆ ಮುಗಿದ ಮೇಲೆ ಎಲ್ಲಾ OMR ಶೀಟ್ ಸ್ಕ್ಯಾನ್ ಮಾಡಲಾಗುತ್ತೆ. ಆದರೆ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ ಸಂಬಂಧ ಹಾರ್ಡ್ ಡಿಸ್ಕ್ ಇಲ್ಲ. ಹೀಗಾಗಿ ಅತೀದೊಡ್ಡ ಅಕ್ರಮ ಕೇಂದ್ರ ಕಚೇರಿಯಲ್ಲಿಯೇ ನಡೆದಿರುವುದಕ್ಕೆ ಪುಷ್ಠಿ ಸಿಕ್ಕಿದೆ. ಪ್ರಶ್ನೆ ಪತ್ರಿಕೆ ಲೀಕ್ ಮತ್ತು OMR ಟ್ಯಾಪರಿಂಗ್ ಆಗಿರೋದು ಸ್ಪಷ್ಟ ಎನ್ನಲಾಗಿದೆ.
ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಕೆಪಿಎಸ್ಸಿ ಸದಸ್ಯೆ ಶಾಂತ ಹೊಸಮನಿ ಸೇರಿ 10 ಸದಸ್ಯರು, 45 ಅಧಿಕಾರಿಗಳು, ಸಿಬ್ಬಂದಿಗೂ ಸಿಐಡಿ ಅದಾಗಲೇ ನೋಟಿಸ್ ನೀಡಿ ವಿಚಾರಣೆಗೆ ಬರಲು ಸೂಚಿಸಿದೆ. ಐಎ ಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆ, ಕಚೇರಿಗೂ ನೋಟಿಸ್ ಅಂಟಿಸಲಾಗಿದೆ. ಉತ್ತೀರ್ಣಗೊಂಡ 329 ಅಭ್ಯರ್ಥಿಗಳಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಸಿಐಡಿಯಿಂದ ಪ್ರತಿದಿನ ಸುಮಾರು 10 ಅಭ್ಯರ್ಥಿಗಳ ಹೇಳಿಕೆ ದಾಖಲು ನಡೆಯುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ OMR ಪ್ರತಿ ಕೂಡ ಸೀಜ್ ಮಾಡಲಾಗಿದ್ದು, ಮೂರು ಪರೀಕ್ಷಾ ಕೇಂದ್ರಗಳ ಸಿಸಿಟಿವಿಗಳ ಡಿವಿಆರ್ ವಶಕ್ಕೆ ಪಡೆದು ಎಲ್ಲವನ್ನೂಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ.

