ಶಿವಮೊಗ್ಗ : ಜಿಲ್ಲೆಯಲ್ಲಿ ಗಣೇಶ ಹಬ್ಬದ ಆಚರಣೆ ಮತ್ತು ಮೆರವಣಿಗೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ದಿ:14/09/2026 ರಿಂದ ದಿ:13/10/2026 ರವರೆಗೆ 30 ದಿನಗಳ ಕಾಲ ಡಿಜೆ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದುಗಳನ್ನು ಸಿಡಿಸುವುದನ್ನು ಮತ್ತು ಬೈಕ್ ರ್ಯಾಲಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಸೆ.14 ರಂದು ಜಿಲ್ಲಾದ್ಯಂತ ಗಣೇಶ ಹಬ್ಬ ನಡೆಯಲಿದ್ದು, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರೊಂದಿಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆಗಳಿರುತ್ತವೆ.
ಈ ಹಿನ್ನೆಲೆಯಲ್ಲಿ, ಪೊಲೀಸ್ ಅಧೀಕ್ಷಕರ ಶಿಫಾರಸಿನಂತೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಪೊಲೀಸ್ ಕಾಯ್ದೆ-1963 ರ ಕಲಂ 35, 36 ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲಾದ್ಯಂತ ಸೆ. 14 ರಿಂದ ಅ.13 ರವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.
ಗಣೇಶ ವಿಸರ್ಜನೆಗೆ ತೆಪ್ಪ ಬಳಕೆ ನಿಷೇಧ : ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ
ಜಿಲ್ಲೆಯಲ್ಲಿ ಮುಂಬರುವ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿಗಳ ವಿಸರ್ಜನೆ ವೇಳೆ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಹಾಗೂ ಸಾರ್ವಜನಿಕ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ದಿನಾಂಕ 14-09-2026 ರಿಂದ ಆರಂಭವಾಗುವ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹೊಳೆ, ನದಿ, ಕೆರೆ ಹಾಗೂ ಹಿನ್ನೀರು ಪ್ರದೇಶಗಳಲ್ಲಿ ತೆಪ್ಪದ ಮೂಲಕ ಮೂರ್ತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ. ಈ ಹಿಂದೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ತೆಪ್ಪ ಮುಳುಗಿ 12 ಜನರು ಸಾವನ್ನಪ್ಪಿದ್ದ ದುರಂತ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಅಂತಹ ಅನಾಹುತಗಳು ಮರುಕಳಿಸದಂತೆ ತಡೆಯಲು ಈ ಸುರಕ್ಷತಾ ಮಾರ್ಗಸೂಚಿಗಳನ್ನು ವಿಧಿಸಲಾಗಿದೆ.
ಪ್ರಮುಖ ನಿಯಮಗಳು ಹಾಗೂ ನಿರ್ದೇಶನಗಳು:
ತೆಪ್ಪದ ಮೂಲಕ ವಿಸರ್ಜನೆ ಮಾಡುವಾಗ ತೆಪ್ಪದಲ್ಲಿ ಕೇವಲ 2 ರಿಂದ 3 ಜನರಿಗೆ ಮಾತ್ರ ಹೋಗಲು ಅವಕಾಶವಿರುತ್ತದೆ.
ಲೈಫ್ ಜ್ಯಾಕೆಟ್ ಕಡ್ಡಾಯ: ತೆಪ್ಪದಲ್ಲಿ ತೆರಳುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್ ಜ್ಯಾಕೆಟ್ ಧರಿಸಿರಬೇಕು.ನುರಿತ ಈಜುಗಾರರ ಸಮಕ್ಷಮದಲ್ಲೇ ಗಣಪತಿ ಮೂರ್ತಿ ವಿಸರ್ಜನೆ ಪ್ರಕ್ರಿಯೆಯನ್ನು ನಡೆಸತಕ್ಕದ್ದು.
ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 35 ಮತ್ತು 36ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸ್ಸಿನ ಮೇರೆಗೆ ಜಿಲ್ಲೆಯಾದ್ಯಂತ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗಳು ಸಂಪೂರ್ಣವಾಗಿ ಮುಕ್ತಾಯಗೊಳ್ಳುವವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
*ಕರ್ನಾಟಕ ಒಕ್ಕಲಿಗ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ
ಶಿವಮೊಗ್ಗ : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ 2026-27 ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಾವಲಂಭಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ,(ಬ್ಯಾಂಕುಗಳ ಸಹಯೋಗದೊಂದಿಗೆ) ಶೈಕ್ಷಣಿಕ ಸಾಲ ಯೋಜನೆ (ಹೊಸ ಮತ್ತು ನವೀಕರಣ), ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ, ಸ್ವಾತಂತ್ರ್ಯ ಮಹೋತ್ಸವದ ಅಮೃತ ಮುನ್ನಡೆ ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗ-3ರಲ್ಲಿ ಬರುವ ಒಕ್ಕಲಿಗ ಸಮುದಾಯಗಳಿಗೆ ಸೇರಿದ ಕ್ರಮ ಸಂಖ್ಯೆ 1(ಎ) ಯಿಂದ (ಟಿ) ವರೆಗೆ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ಮರಸು ಒಕ್ಕಲಿಗ, ಗೌಡ/ಗೌಡ, ಹಳ್ಳಿಕಾರ್, ಕುಂಚಿಟಿಗ, ಗವಡ, ಕಾಪು, ಹೆಗ್ಗಡೆ, ಕಮ್ಮ, ರೆಡ್ಡಿ, ಗೌಂಡರ್, ನಾಮಧಾರಿಗೌಡ, ಉಪ್ಪಿನಕೊಳಗ/ಉತ್ತಮ ಕೊಳಗ ಸಮುದಾಯಗಳಿಗೆ ಸೇರಿದ ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನಿಗಮವು ಅನುಷ್ಠಾನಗೊಳಿಸಿರುವ ಮೇಲ್ಕಂಡ ಯೋಜನೆಗಳನ್ನು ಶಾಸಕರು ಅಥವಾ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ರಚಿಸಿದ ಆಯ್ಕೆ ಸಮಿತಿಯ ಮೂಲಕ ಆಯ್ಕೆಯನ್ನು ಮಾಡಲಾಗುವುದು. 2024-25 ಮತ್ತು 2025-26 ನೇ ಸಾಲಿನಲ್ಲಿ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಆಯ್ಕೆ ಸಮಿತಿಗಳಲ್ಲಿ ಕಾರಣಾಂತರಗಳಿಂದ ಆಯ್ಕೆಯಾಗದೇ ಇರುವ ಅರ್ಹ ಅರ್ಜಿದಾರರು 2025-26 ನೇ ಸಾಲಿನ ಪ್ರಕಟಣೆಗೆ ಅರ್ಜಿ ಸಲ್ಲಿಸುವ ಅವಶ್ಯಕವಿರುವುದಿಲ್ಲ. ಕುಟುಂಬದ ಒಬ್ಬ ಸದಸ್ಯರು ಮಾತ್ರ ಮೇಲ್ಕಂಡ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು.
ಈ ಸೌಲಭ್ಯಗಳನ್ನು ಪಡೆಯಲು ಸೇವಾಸಿಂಧು http:/sevasindhu.karnataka.gov.in ಪೋರ್ಟಲ್‌ನ ಮುಖಾಂತರ ಗ್ರಾಮ ಒನ್, ಶಿವಮೊಗ್ಗ ಒನ್, ಕರ್ನಾಟಕ ಒನ್, ಮೂಲಕ ಆನ್ ಲೈನ್ ನಲ್ಲಿ ಮತ್ತು ಕ್ರಮಸಂಖ್ಯೆ 06 ರಲ್ಲಿ ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆಗೆ ಅರ್ಜಿಯನ್ನು ಕೌಶಲ್ಯ ಕರ್ನಾಟಕ ಅಭಿವೃದ್ಧಿ ನಿಗಮದ ತಂತ್ರಾಂಶ https://www.kaushalkar.com ನಲ್ಲಿ ಅರ್ಜಿಯನ್ನು ಸಲ್ಲಿಸಲು ಸೆ.30 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮದ ಜಾಲತಾಣhttps://kvcdc.karnataka.gov.in ದೂ.ಸಂ.: 080-29904350/29904268 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ಭಾಗ್ಯ ನಿಲಯ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ ಇಲ್ಲಿ ಪೆಡೆಯಬಹುದಾಗಿದೆ. ದೂ. ಸಂ. 08182-229634 ಸಂಪರ್ಕಿಸಿ ಎಂದು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

