HomeBusinessಗಣೇಶ ಚತುರ್ಥಿಯಂದು ಮೋದಕ ಪ್ರಿಯರ ಹಬ್ಬ: ಒಂದೇ ದಿನ ಲಕ್ಷಕ್ಕೂ ಅಧಿಕ ಆರ್ಡರ್ !

ಗಣೇಶ ಚತುರ್ಥಿಯಂದು ಮೋದಕ ಪ್ರಿಯರ ಹಬ್ಬ: ಒಂದೇ ದಿನ ಲಕ್ಷಕ್ಕೂ ಅಧಿಕ ಆರ್ಡರ್ !

ದೇಶಾದ್ಯಂತ ಗಣೇಶ ಚತುರ್ಥಿಯ ಮೊದಲ ದಿನವಾದ ಸೆಪ್ಟೆಂಬರ್ 14 ರಂದು ಸಂಭ್ರಮ ಮುಗಿಲುಮುಟ್ಟಿದ್ದು, ಆನ್‌ಲೈನ್ ಫುಡ್ ಡೆಲಿವರಿ ವೇದಿಕೆಯಾದ ಸ್ವಿಗ್ಗಿಯಲ್ಲಿ ಬರೋಬ್ಬರಿ 1,03,380 ಮೋದಕದ ಆರ್ಡರ್‌ಗಳು ಡೆಲಿವರಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೋದಕದ ಬೇಡಿಕೆಯಲ್ಲಿ ಶೇಕಡಾ 13.3 ರಷ್ಟು ಏರಿಕೆಯಾಗಿದ್ದು, ಹಬ್ಬದ ಸಂಪ್ರದಾಯದೊಂದಿಗೆ ಆನ್‌ಲೈನ್ ಅನುಕೂಲತೆಯನ್ನು ಜನತೆ ಹೆಚ್ಚು ನೆಚ್ಚಿಕೊಂಡಿರುವುದು ಸ್ಪಷ್ಟವಾಗಿದೆ.

ಹಬ್ಬದ ಮುಂಜಾನೆ 7 ಗಂಟೆಯಿಂದ 11 ಗಂಟೆಯ ಅವಧಿಯಲ್ಲಿ ಮೋದಕಗಳಿಗೆ ಭಾರಿ ಬೇಡಿಕೆ ಕಂಡುಬಂದಿದ್ದು, ಈ ನಾಲ್ಕು ಗಂಟೆಗಳಲ್ಲಿ ಸರಾಸರಿ ಪ್ರತಿ ಗಂಟೆಗೆ 11,500 ಕ್ಕೂ ಅಧಿಕ ಆರ್ಡರ್‌ಗಳು ದಾಖಲಾಗಿವೆ. ಮೆಟ್ರೋ ನಗರಗಳ ಪೈಕಿ ಮುಂಬೈ, ಬೆಂಗಳೂರು ಮತ್ತು ಪುಣೆ ನಗರಗಳು ಅತಿ ಹೆಚ್ಚು ಮೋದಕ ಆರ್ಡರ್ ಮಾಡಿ ಮುಂಚೂಣಿಯಲ್ಲಿದ್ದರೆ, ಉದಯೋನ್ಮುಖ ನಗರಗಳಲ್ಲಿ ನಾಸಿಕ್, ಜೋಧ್‌ಪುರ ಮತ್ತು ಪಾಟ್ನಾ ಗಮನ ಸೆಳೆದಿವೆ. ಸಿಹಿ ಪ್ರಿಯರು ಸಾಂಪ್ರದಾಯಿಕ ಮಾವಾ ಮೋದಕ (ಪ್ರತಿ ಗಂಟೆಗೆ 185 ಆರ್ಡರ್‌ಗಳು), ಉಕಡಿಚೆ ಮೋದಕ, ಕಾರ ಕೊಳುಕಟ್ಟೈ ಹಾಗೂ ಕೇಸರ್ ಮೋದಕಗಳಿಗೆ ಮೊದಲ ಆದ್ಯತೆ ನೀಡಿದ್ದಾರೆ.

ದೇಶದ ಒಟ್ಟು ಮೋದಕ ಆರ್ಡರ್‌ಗಳ ಪೈಕಿ ಶೇಕಡಾ 41 ರಷ್ಟು ಪಾಲು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ದಾಖಲಾಗಿದೆ. ಮುಂಬೈ, ಪುಣೆ, ನಾಗ್ಪುರ, ನಾಸಿಕ್ ಮತ್ತು ಅಮರಾವತಿ ನಗರಗಳಲ್ಲಿ ಹಬ್ಬದ ಕಳೆ ಹೆಚ್ಚಾಗಿತ್ತು. ದೇಶದಲ್ಲೇ ಅತಿ ಹೆಚ್ಚು ಮೌಲ್ಯದ ಮೋದಕ ಆರ್ಡರ್‌ಗಳು ಮುಂಬೈನಿಂದಲೇ ಬಂದಿದ್ದು, ಒಬ್ಬ ಗ್ರಾಹಕ 144 ಮೋದಕಗಳಿಗಾಗಿ ಬರೋಬ್ಬರಿ 29,693 ರೂಪಾಯಿ ಪಾವತಿಸಿರುವುದು ವಿಶೇಷವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇವಲ ಗಣೇಶ ಚತುರ್ಥಿ ಮಾತ್ರವಲ್ಲದೆ, ಇತ್ತೀಚೆಗೆ ಮುಕ್ತಾಯಗೊಂಡ ಕೃಷ್ಣಾಷ್ಟಮಿ ಮತ್ತು ರಕ್ಷಾಬಂಧನ ಹಬ್ಬಗಳಲ್ಲೂ ಸಿಹಿ ತಿನಿಸುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಸೆಪ್ಟೆಂಬರ್ 4 ರಂದು ನಡೆದ ಕೃಷ್ಣಾಷ್ಟಮಿಯಂದು ಸಾಂಪ್ರದಾಯಿಕ ಸಿಹಿಗಳಿಗೆ ಕಳೆದ ವರ್ಷಕ್ಕಿಂತ ಶೇಕಡಾ 33 ರಷ್ಟು ಹೆಚ್ಚಿನ ಆರ್ಡರ್‌ಗಳು ಬಂದಿದ್ದವು. ಕಾಜು ಕತ್ಲಿ, ಮಿಲ್ಕ್ ಕೇಕ್ ಹಾಗೂ ಮಥುರಾ ಪೇಡಾ ಹೆಚ್ಚು ಮಾರಾಟವಾಗಿದ್ದು, ಪೇಡಾ ಆರ್ಡರ್‌ಗಳಲ್ಲಿ ನಾಲ್ಕು ಪಟ್ಟು ಏರಿಕೆ ದಾಖಲಾಗಿತ್ತು. ಕಲ್ಕತ್ತಾ, ಜೈಪುರ, ನೋಯ್ಡಾ ಮತ್ತು ಗುವಾಹಟಿಯಲ್ಲಿ ಹಾಲಿನ ಸಿಹಿ ತಿನಿಸುಗಳಿಗೆ ಭಾರಿ ಬೇಡಿಕೆ ಕಂಡುಬಂದಿತ್ತು.

ಅದೇ ರೀತಿ ಆಗಸ್ಟ್ 28 ರಂದು ನಡೆದ ರಕ್ಷಾಬಂಧನ ಹಬ್ಬದಂದು ಪ್ರತಿ ಗಂಟೆಗೆ ಸರಾಸರಿ 11,500 ಸಿಹಿ ಆರ್ಡರ್‌ಗಳು ದಾಖಲಾಗಿದ್ದು, ಶೇಕಡಾ 22.8 ರಷ್ಟು ಬೆಳವಣಿಗೆ ಕಂಡಿತ್ತು. ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈ ನಗರಗಳು ಮುಂಚೂಣಿಯಲ್ಲಿದ್ದವು. ಕಾಜು ಕತ್ಲಿ ಪ್ರತಿ ಗಂಟೆಗೆ ಸರಾಸರಿ 1,668 ಆರ್ಡರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಗುಲಾಬ್ ಜಾಮೂನ್ ಪ್ರತಿ ಗಂಟೆಗೆ 1,640 ಆರ್ಡರ್‌ಗಳೊಂದಿಗೆ ಎರಡನೇ ಸ್ಥಾನ ಪಡೆದಿತ್ತು. ನೋಯ್ಡಾದ ಗ್ರಾಹಕರೊಬ್ಬರು 12 ಬಾಕ್ಸ್ ಕಾಜು ಕತ್ಲಿಗೆ 15,406 ರೂಪಾಯಿ ವ್ಯಯಿಸಿದ್ದರು. ಎಲ್ಲಕ್ಕಿಂತ ಮಿಗಿಲಾಗಿ, ಬೆಂಗಳೂರಿನ ಗ್ರಾಹಕರೊಬ್ಬರು ರಕ್ಷಾಬಂಧನದ ಸಂದರ್ಭದಲ್ಲಿ ಬರೋಬ್ಬರಿ 2,54,798 ರೂಪಾಯಿ ಮೌಲ್ಯದ ಸಿಹಿ ಹಾಗೂ ಆಹಾರವನ್ನು ಆರ್ಡರ್ ಮಾಡುವ ಮೂಲಕ ದೇಶದಲ್ಲೇ ಅತ್ಯಧಿಕ ಬಿಲ್ಲಿಂಗ್ ದಾಖಲಿಸಿದ್ದರು. ಈ ಹಬ್ಬದ ಅಂಕಿ-ಅಂಶಗಳು ಭಾರತೀಯ ಸಂಸ್ಕೃತಿಯಲ್ಲಿ ಸಿಹಿಯ ಮಹತ್ವವನ್ನು ಸಾರುತ್ತಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular