ಐಪಿಎಲ್ 2026ರ ಹಂಗಾಮು ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ನಡುವೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತಮಗಾದ ಗಂಭೀರ ಗಾಯ ಮತ್ತು ಅದರಿಂದ ಚೇತರಿಸಿಕೊಳ್ಳಲು ಪಟ್ಟ ಕಷ್ಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸಂಭವಿಸಿದ ಭೀಕರ ಗಾಯದಿಂದಾಗಿ ಅಯ್ಯರ್ ಸುಮಾರು ಮೂರು ತಿಂಗಳು ಕ್ರಿಕೆಟ್ ಅಂಗಳದಿಂದ ದೂರ ಉಳಿಯಬೇಕಾಯಿತು.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವೇಳೆ ಅಯ್ಯರ್ ಅವರ ಗುಲ್ಮಕ್ಕೆ (Spleen) ಗಂಭೀರ ಪೆಟ್ಟಾಗಿತ್ತು. ಆಂತರಿಕ ರಕ್ತಸ್ರಾವದಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಈ ನೋವಿನ ದಿನಗಳನ್ನು ನೆನಪಿಸಿಕೊಂಡ ಅಯ್ಯರ್, ಗಾಯದ ತೀವ್ರತೆಯಿಂದಾಗಿ ನಾನು ಸುಮಾರು 7 ಕೆಜಿ ತೂಕ ಕಳೆದುಕೊಂಡಿದ್ದೆ. ಕಳೆದುಕೊಂಡ ತೂಕವನ್ನು ಮತ್ತೆ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ನಾನು ಶ್ರಮ ಹಾಕಬೇಕಾಯಿತು ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಸುಮಾರು ಎರಡು ತಿಂಗಳ ಸುದೀರ್ಘ ಚಿಕಿತ್ಸೆ ಮತ್ತು ವಿಶ್ರಾಂತಿಯ ನಂತರ ಜನವರಿಯಲ್ಲಿ ಅಯ್ಯರ್ ಮತ್ತೆ ಫಿಟ್ನೆಸ್ ಮರಳಿ ಪಡೆದರು. ಸದ್ಯ ಐಪಿಎಲ್ ಆಡಲು ಸಂಪೂರ್ಣ ಸಜ್ಜಾಗಿರುವ ಅವರು, ಸವಾಲುಗಳನ್ನು ಎದುರಿಸುವುದು ನನಗೆ ಇಷ್ಟ. ಕಳೆದುಕೊಂಡ ತೂಕ ಮತ್ತು ಲಯವನ್ನು ಮರಳಿ ಪಡೆಯುವುದು ಒಂದು ದೊಡ್ಡ ಸವಾಲಾಗಿತ್ತು. ಈಗ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಿಷ್ಠನಾಗಿದ್ದೇನೆ. ನಮ್ಮ ತಂಡದ ಕುಟುಂಬದೊಂದಿಗೆ ಕಾಲ ಕಳೆಯಲು ಮತ್ತು ಟ್ರೋಫಿ ಗೆಲ್ಲಲು ನಾನು ಕಾತುರನಾಗಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡಕ್ಕೆ ಅಯ್ಯರ್ ಅವರ ಫಿಟ್ನೆಸ್ ದೊಡ್ಡ ಬಲ ತುಂಬಿದೆ. ಗಾಯದ ಕರಾಳ ದಿನಗಳನ್ನು ಮೆಟ್ಟಿ ನಿಂತಿರುವ ಶ್ರೇಯಸ್, ಈ ಬಾರಿ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ಅವರ ಈ ಹಠ ಮತ್ತು ಕಮ್‌ಬ್ಯಾಕ್ ಹಾದಿ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

