ಬೆಂಗಳೂರು: ರಾಮನಗರ ಜಿಲ್ಲೆ( ಈಗಿನ ಬೆಂಗಳೂರು ದಕ್ಷಿಣ )ಯ ರಾಜಕೀಯ ಇತಿಹಾಸದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವ ಐದನೇ ನಾಯಕರಾಗಿದ್ದಾರೆ.
ಈ ಹಿಂದೆ ರಾಮನಗರ ಜಿಲ್ಲೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅಥವಾ ಈ ಜಿಲ್ಲೆಯ ಕ್ಷೇತ್ರಗಳಿಂದ ಆಯ್ಕೆಯಾದ ನಾಲ್ವರು ನಾಯಕರು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಕೆಂಗಲ್ ಹನುಮಂತಯ್ಯ: ಕರ್ನಾಟಕದ ಮೊದಲ ಚುನಾಯಿತ ಮುಖ್ಯಮಂತ್ರಿ ಮತ್ತು ವಿಧಾನಸೌಧದ ನಿರ್ಮಾತರು. ಇವರು ರಾಮನಗರ ತಾಲ್ಲೂಕಿನವರು ಮತ್ತು ರಾಮನಗರ ಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದರು.
ರಾಮಕೃಷ್ಣ ಹೆಗಡೆ: ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕನಕಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಎಚ್.ಡಿ. ದೇವೇಗೌಡ: 1994ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿ ಕರ್ನಾಟಕದ ಮುಖ್ಯಮಂತ್ರಿಯಾದರು, ನಂತರ ಅವರು ಭಾರತದ ಪ್ರಧಾನ ಮಂತ್ರಿಯೂ ಆದರು.
ಎಚ್.ಡಿ. ಕುಮಾರಸ್ವಾಮಿ: ರಾಮನಗರ ಕ್ಷೇತ್ರದಿಂದಲೇ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು.
ಈಗ ಡಿ.ಕೆ. ಶಿವಕುಮಾರ್ ಅವರು ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಈ ಜಿಲ್ಲೆಯಿಂದ ಮುಖ್ಯಮಂತ್ರಿ ಹುದ್ದೆಗೇರುತ್ತಿರುವ 5ನೇ ನಾಯಕರಾಗಿದ್ದಾರೆ. ಇವರು ಜೂನ್ 3, 2026 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಶಿವಮೊಗ್ಗದಿಂದ ನಾಲ್ವರು ಸಿಎಂ
ಶಿವಮೊಗ್ಗ ಜಿಲ್ಲೆಯು ಕರ್ನಾಟಕ ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿದೆ. ಆದರೆ ಗಮನಾರ್ಹ ವಿಷಯವೆಂದರೆ, ಈ ನಾಲ್ವರೂ ಸಹ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಕಡಿದಾಳ್ ಮಂಜಪ್ಪ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಇವರು, 1956ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರು ಜಿಲ್ಲೆಯ ಮೊದಲ ಮುಖ್ಯಮಂತ್ರಿ.
ಎಸ್. ಬಂಗಾರಪ್ಪ: ಸೊರಬ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಇವರು 1990ರಿಂದ 1992ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಜೆ.ಎಚ್. ಪಟೇಲ್: ಇವರು ಅವಿಭಜಿತ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ಕ್ಷೇತ್ರದಿಂದ ಆಯ್ಕೆಯಾಗಿದ್ದವರು. ಇವರು 1996ರಿಂದ 1999ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಬಿ.ಎಸ್. ಯಡಿಯೂರಪ್ಪ: ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಇವರು ಹಲವು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ನಾಲ್ವರು ನಾಯಕರು ಶಿವಮೊಗ್ಗ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಸ್ಥಾನ ಹೊಂದಿದ್ದಾರೆ.

