HomeLatest Newsಐಎಎಸ್, ಕೆಎಎಸ್, ಬ್ಯಾಂಕ್, ಪಿಎಸ್ಐ ಸೇರಿ ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಿಗೆ ಉಚಿತ ಕೋಚಿಂಗ್ ‘ಸಂಕಲ್ಪ’

ಐಎಎಸ್, ಕೆಎಎಸ್, ಬ್ಯಾಂಕ್, ಪಿಎಸ್ಐ ಸೇರಿ ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಿಗೆ ಉಚಿತ ಕೋಚಿಂಗ್ ‘ಸಂಕಲ್ಪ’

ದಾವಣಗೆರೆ: ಐಎಎಸ್, ಕೆಎಎಸ್ ಸೇರಿದಂತೆ ಬ್ಯಾಂಕಿಂಗ್, ಪಿ.ಎಸ್.ಐ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ದಾವಣಗೆರೆಯಲ್ಲಿಯೇ ಸಂಕಲ್ಪ ಕೇಂದ್ರದಲ್ಲಿ ನುರಿತ, ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ಕೋಚಿಂಗ್ ಸಿಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

 ಅವರು ಶುಕ್ರವಾರ ಜಿಲ್ಲಾ ಆಡಳಿತ, ದಾವಣಗೆರೆ ವಿ.ವಿ ಹಾಗೂ ಎಸ್.ಎಸ್.ಕೇರ್ ಟ್ರಸ್ಟ್ ಮತ್ತು ಐಎಎಸ್ ಬಾಬಾ ಕೋಚಿಂಗ್ ಕೇಂದ್ರದ ಸಹಯೋಗದಲ್ಲಿ ವಿದ್ಯಾನಗರ ರಸ್ತೆಯಲ್ಲಿನ ದೃಶ್ಯಕಲಾ ಕಾಲೇಜು ಆವಣರಲ್ಲಿ ಆರಂಭಿಸಲಾದ ಸಂಕಲ್ಪ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಸ್ಪರ್ಧಾತ್ಮಕ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಬೇಕು, ಈ ಮೂಲಕ ಜಿಲ್ಲೆಯ ಪ್ರತಿಭಾನ್ವಿತ ಯುವ ವಿದ್ಯಾವಂತರಿಗೆ ಅಖಿಲ ಭಾರತ ಮಟ್ಟದ ನಾಗರಿಕ ಸೇವಾ ಹಾಗೂ ಇತರೆ ಹುದ್ದೆಗಳ ಪರೀಕ್ಷೆ ತೆಗೆದುಕೊಂಡು ಉನ್ನತ ಹುದ್ದೆಗಳಿಗೆ ಜಿಲ್ಲೆಯವರು ಹೋಗಬೇಕೆಂಬ ಕನಸಿನೊಂದಿಗೆ ಸಂಕಲ್ಪ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಇಲ್ಲಿ ಖ್ಯಾತ ಐಎಎಸ್‍ಬಾಬಾ ಕೋಚಿಂಗ್ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂಕಲ್ಪ ಕೋಚಿಂಗ್ ಕೇಂದ್ರ ಆರಂಭಿಸಲಾಗುತ್ತಿದೆ. ಕೋಚಿಂಗ್ ಕೇಂದ್ರಕ್ಕೆ ಎಸ್.ಎಸ್.ಕೇರ್ ಟ್ರಸ್ಟ್‍ನಿಂದ ವೆಚ್ಚವನ್ನು ಭರಿಸಿ ಜಿಲ್ಲೆಯ ಅಭ್ಯರ್ಥಿಗಳಿಗೆ ಉಚಿತವಾಗಿ ಕೋಚಿಂಗ್ ನೀಡಲಾಗುತ್ತದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಕಲ್ಪ ಕೇಂದ್ರದಲ್ಲಿ ಉಚಿತ ಕೋಚಿಂಗ್‍ಗೆ ಪ್ರವೇಶ ಪಡೆಯಲು ಜುಲೈ 24 ರೊಳಗಾಗಿ www.IASbaba.com      ಮೂಲಕ ಗೂಗಲ್ ಫಾರಂ ಮೂಲಕ ನೋಂದಣಿ ಮಾಡಬೇಕು. ನೋಂದಣಿಯಾದವರಿಗೆ ಜುಲೈ 29 ರಂದು ಲಿಖಿತ ಪರೀಕ್ಷೆಯನ್ನು ದಾವಣಗೆರೆಯಲ್ಲಿ ನಡೆಸಲಾಗುತ್ತದೆ. ಎರಡು ದಿನಗಳಲ್ಲಿ ಫಲಿತಾಂಶ ಪ್ರಕಟಿಸಿ ತರಬೇತಿಗೆ 300 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ತರಗತಿಗಳು ಆಗಸ್ಟ್ 4 ರಿಂದ ಪ್ರಾರಂಭವಾಗಲಿವೆ ಎಂದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ,  ಕೋಚಿಂಗ್ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಉಚಿತವಾಗಿ ನೀಡಲಾಗುವುದು, ಇದಕ್ಕಾಗಿ ಗ್ರಂಥಾಲಯ ತೆರೆದು ಇದಕ್ಕೆ ಬೇಕಾದ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. ತರಬೇತಿ ಕೇಂದ್ರವು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಪೊಲೀಸ್ ಅಧೀಕ್ಷಕರ ಉಸ್ತುವಾರಿಯಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು. 

ಹಾಸ್ಟೆಲ್ ಸಮಸ್ಯೆ ಕೂಡ ಬಗೆಹರಿಸುತ್ತೇವೆ, ಪಕ್ಕದ ಜಿಲ್ಲೆಯಿಂದ ಕೂಡ ಬರಬಹುದು. ಇವರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲಿದ್ದೇವೆ. ಪಿಎಸ್‍ಐ, ಕೆಎಎಸ್, ಐಎಎಸ್, ಬ್ಯಾಂಕ್, ರೈಲ್ವೆ ಪರೀಕ್ಷಾ ತರಬೇತಿ ಕೂಡ ನೀಡಲಿದ್ದೇವೆ.  ಅಭ್ಯರ್ಥಿಗಳ ಆಸಕ್ತಿ ನೋಡಿ ತರಬೇತಿ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಕೋಚಿಂಗ್ ಹೋದರೆ ತಿಂಗಳಿಗೆ 25 ಸಾವಿರ ವೆಚ್ಚ ಆಗಲಿದೆ. ವರ್ಷಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಆಗಲಿದೆ. ಇದರಿಂದ ಬಡ ಪ್ರತಿಭಾನ್ವಿತರು ಹೋಗಲು ಸಾಧ್ಯವಾಗದಿರುವುದರಿಂದ ಇದು ದಾವಣಗೆರೆ ಜನರಿಗೆ ಇಲ್ಲಿ ಉಚಿತವಾಗಿ ಲಭ್ಯ ಆಗುತ್ತ್ತದೆ. ಗಂಭೀರವಾಗಿ ಓದುವ ಗುರಿಯೊಂದಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಇಲ್ಲಿ ಅವಕಾಶ ನೀಡಲಾಗುತ್ತದೆ, ಮೊದಲ ಆದ್ಯತೆ ದಾವಣಗೆರೆ ಜಿಲ್ಲೆಯ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ ಎಂದರು.

ದಾವಣಗೆರೆ ವಿವಿ ಕುಲಪತಿ ಪ್ರೊ..ಬಿ.ಡಿ.ಕುಂಬಾರ ಮಾತನಾಡಿ, ಕೇಂದ್ರದಲ್ಲಿ ವಿಶ್ವವಿದ್ಯಾಲಯದ ನುರಿತ ಪ್ರಾಧ್ಯಾಪಕರು ಇಲ್ಲಿ ತರಬೇತಿ ನೀಡಲಿದ್ದಾರೆ. ನಿವೃತ್ತ ಪ್ರಾಧ್ಯಾಪಕರ ಸೇವೆಯನ್ನೂ ಬಳಸಿಕೊಳ್ಳುವ ಉದ್ದೇಶ ಇದೆ. ಮುಂದಿನ ಮೂರು ವರ್ಷಗಳಲ್ಲಿ ಉತ್ತಮ ಫಲಿತಾಂಶ ನೀಡಲಿದೆ ಎಂಬ ಭರವಸೆ ಇದೆ ಎಂದರು.

 ಈ ವೇಳೆ ವೀರೇಶ್ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular