ಬಿಹಾರದ ಪೂರ್ಣಿಯಾ ಕ್ಷೇತ್ರದ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರನ್ನು ಪಾಟ್ನಾ ಪೊಲೀಸರು ಶುಕ್ರವಾರ ಮಧ್ಯರಾತ್ರಿ ಬಂಧಿಸಿದ್ದಾರೆ. ಸುಮಾರು 31 ವರ್ಷಗಳಷ್ಟು ಹಳೆಯದಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಹೌದು. ಈ ಬಂಧನವು 1995ರಲ್ಲಿ ಪಾಟ್ನಾದ ಗರ್ದನಿಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ (ಸಂಖ್ಯೆ 552/95) ಸಂಬಂಧಿಸಿದ್ದಾಗಿದೆ. ವಂಚನೆಯ ಮೂಲಕ ಮನೆ ಬಾಡಿಗೆಗೆ ಪಡೆದ ಆರೋಪ ಇವರ ಮೇಲಿದೆ.
ಶುಕ್ರವಾರ ರಾತ್ರಿ ಸುಮಾರು 9:30ಕ್ಕೆ ಪೊಲೀಸರು ಪಪ್ಪು ಯಾದವ್ ಅವರ ಪಾಟ್ನಾ ನಿವಾಸಕ್ಕೆ ತಲುಪಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ ಅವರ ಬೆಂಬಲಿಗರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.ತಮಗೆ ಆರೋಗ್ಯ ಸರಿ ಇಲ್ಲ ಎಂದು ಪಪ್ಪು ಯಾದವ್ ವಾದಿಸಿದರೂ, ಅಂತಿಮವಾಗಿ ರಾತ್ರಿ 12 ಗಂಟೆಯ ಸುಮಾರಿಗೆ ಪೊಲೀಸರು ಅವರನ್ನು ವಶಕ್ಕೆ ಪಡೆದರು. ನಂತರ ಅವರನ್ನು ವೈದ್ಯಕೀಯ ತಪಾಸಣೆಗಾಗಿ IGIMS ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆರೋಪವೇನು?: ವಿನೋದ್ ಬಿಹಾರಿ ಲಾಲ್ ಎಂಬುವವರು ಪಪ್ಪು ಯಾದವ್ ವಿರುದ್ಧ ದೂರು ನೀಡಿದ್ದರು. ನ್ಯಾಯಾಲಯದ ಸಮನ್ಸ್ಗಳಿಗೆ ಪಪ್ಪು ಯಾದವ್ ಗೈರಾಗಿದ್ದರಿಂದ, ಇತ್ತೀಚೆಗೆ ಎಂಪಿ-ಎಂಎಲ್ಎ ಕೋರ್ಟ್ ಅವರ ಆಸ್ತಿ ಜಪ್ತಿಗೆ ಆದೇಶಿಸಿತ್ತು ಮತ್ತು ಬಂಧನ ವಾರಂಟ್ ಜಾರಿಗೊಳಿಸಿತ್ತು.
ರಾಜಕೀಯ ಸೇಡು: ಈ ಬಂಧನವನ್ನು ಪಪ್ಪು ಯಾದವ್ ಅವರು “ರಾಜಕೀಯ ಸೇಡಿನ ಕ್ರಮ” ಎಂದು ಕರೆದಿದ್ದಾರೆ ಮತ್ತು ತಮ್ಮ ಜೀವಕ್ಕೆ ಅಪಾಯವಿರುವುದಾಗಿ ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ವಾರಂಟ್ ಪ್ರತಿ ತೋರಿಸಿದ ನಂತರವೇ ಈ ಹೈ-ವೋಲ್ಟೇಜ್ ಡ್ರಾಮಾ ಅಂತ್ಯಗೊಂಡು ಬಂಧನ ಪ್ರಕ್ರಿಯೆ ಪೂರ್ಣಗೊಂಡಿತು.

