ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಚಾಮರಾಜನಗರ, ಮೈಸೂರು, ಹಾಸನ ಭಾಗಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದ ಚಿರತೆ ಈಗ ಬೆಂಗಳೂರಿನಲ್ಲಿಯೂ ಪ್ರತ್ಯಕ್ಷವಾಗಿದ್ದು, ಜನರು ಮನೆಯಿಂದ ಹೊರಬರಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನ ಅಂಜನಾಪುರದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಮನೆಗಳ ಬಳಿ ಓಡಾಟ ನಡೆಸಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಒಂದು ವಾರದಿಂದ ಅಂಜನಾಪುರದಲ್ಲಿ ಚಿರತೆ ಓಡಾಟ ನಡೆಸುತ್ತಿದೆ. ಸಿಸಿಕ್ಯಾಮರಾದಲ್ಲಿ ಚಿರತೆಯ ದೃಶ್ಯ ಸೆರೆಯಾಗಿದ್ದು, ಜನರು ಜೀವ ಭಯದಲ್ಲಿ ಬದುವಂತಾಗಿದೆ.
ಈ ಭಾಗದಲ್ಲಿ ಮನೆ ಬಳಿ ಬಂದಿರುವ ಚಿರತೆ ನಾಯಿಯನ್ನು ಹೊತ್ತೊಯ್ದಿದೆ. ಇದರಿಂದ ಸ್ಥಳೀಯ ನಿವಾಸಿಗಳು ಇನ್ನಷ್ಟು ಆತಂಕಗೊಂಡಿದ್ದು, ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಜೆಪಿ ನಗರದ 9ನೇ ಫೇಸ್ ನ ಅಂಜನಾಪುರ ಬಿಡಿಎ ಲೇಔಟ್ ನಲ್ಲಿ ಕಳೆದ ಒಂದು ವಾರದಲ್ಲಿ ನಾಲ್ಕೈದು ಬಾರಿ ಚಿರತೆ ಕಾಣಿಸಿಕೊಂಡಿದೆ. ಮನೆಯಿಂದ ಹೊರಬರಲೂ ಜನರು ಭಯಪಡುತ್ತಿದ್ದಾರೆ.

