ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶರಾಗಿದ್ದು, ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಹಾಸನ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಚೆನ್ನಮ್ಮ ರಾಜ್ಯದ ಎಲ್ಲಾ ಹೆಣ್ಣು ಮಕ್ಕಳಿಗೆ ತ್ಯಾಗ ಸ್ವರೂಪಿ ಮಾದರಿಯಾಗಿದ್ದಾರೆ. ಮಾಜಿ ಪ್ರಧಾನಿಯವರ ಪತ್ನಿ, ಕೇಂದ್ರ ಸಚಿವರ ತಾಯಿ ಚೆನ್ನಮ್ಮ ರಾಜಕೀಯ ಕುಟುಂಬದ ಮಹಿಳೆಯಾಗಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪದ್ಮನಾಭನಗರದ ನಿವಾಸದಲ್ಲಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಿ.ಕೆ. ಶಿವಕುಮಾರ್, ಪುಷ್ಪಗುಚ್ಛವಿರಿಸಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ದೇವೇಗೌಡರ ಕಾಲಿಗೆ ನಮಸ್ಕರಿಸಿ ಕೈಹಿಡಿದು ಪಕ್ಕದಲ್ಲೇ ಕುಳಿತು ಸಾಂತ್ವನ ಹೇಳಿದ್ದಾರೆ.
ನಾಳೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಹರದನಹಳ್ಳಿ ಬಳಿಯ ಮಾವಿನಕೆರೆ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇಂದು ಬೆಂಗಳೂರಿನಿಂದ ಹರದನಹಳ್ಳಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುವುದು.
ಪದ್ಮನಾಭನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಪೂಜಾ ವಿಧಿ ವಿಧಾನ ನಡೆಯಲಿದೆ. ದೇವೇಗೌಡರ ಕುಟುಂಬದಿಂದ ನಿವಾಸದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲಾಗುವುದು. ನಂತರ ಸಾರ್ವಜನಿಕರಿಗೆ, ಗಣ್ಯರಿಗೆ ಅಂತಿಮ ದರ್ಶನಕ್ಕೆ ದೇವೇಗೌಡರ ಮನೆಯ ಸಮೀಪವಿರುವ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ, ಬೆಳಗ್ಗೆ 11:30ರ ವರೆಗೆ ಸಾರ್ವಜನಿಕರಿಗೆ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದುಮ ನಂತರ ಹಾಸನಕ್ಕೆ ಚೆನ್ನಮ್ಮ ಪಾರ್ಥಿವ ಶರೀರ ಸ್ಥಳಾಂತರ ಮಾಡಲಾಗುವುದು.

