ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಖೋಟಾ ನೋಟು ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎನ್ನಲಾದ ನಗರಸಭೆ ಮಾಜಿ ಸದಸ್ಯ ಚಂದ್ರಶೇಖರ್ ನನ್ನು ಬಂಧಿಸಲಾಗಿದೆ.
ನಾಲ್ಕನೇ ವಾರ್ಡಿನಿಂದ ನಗರ ಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದ ಚಂದ್ರಶೇಖರ್ ವಾರ್ಡ್ ನಲ್ಲಿ ಹಲವು ಬಹು ಮಹಡಿ ಕಟ್ಟಡ, ಮನೆಗಳನ್ನು ಹೊಂದಿದ್ದಾರೆ. ರಾಜ್ಯದ ಮತ್ತು ಹೊರ ರಾಜ್ಯದ ಗ್ರಾಹಕರನ್ನು ಕರೆಸಿ ಕೊಟ್ಟ ಹಣಕ್ಕೆ ಎರಡು ಪಟ್ಟು, ಮೂರು ಪಟ್ಟು ಖೋಟಾ ನೋಟು ಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಚಂದ್ರಶೇಖರ್ ಮನೆ ಮೇಲೆ ಮಾರ್ಚ್ 4ರಂದು ದಾಳಿ ಮಾಡಿದ ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ.
ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ವ್ಯಕ್ತಿಗಳನ್ನು ನಂಬಿಸಿ ಕೊಟ್ಟ ಹಣಕ್ಕೆ ಎರಡು ಪಟ್ಟು, ಮೂರು ಪಟ್ಟು ಖೋಟಾ ನೋಟು ಕೊಡುವುದಾಗಿ ಹೇಳುತ್ತಿದ್ದ ಚಂದ್ರಶೇಖರ್ ಅಸಲಿ ನೋಟುಗಳನ್ನೇ ಕೊಡುತ್ತಿದ್ದ. ಅಸಲಿ ನೋಟುಗಳನ್ನು ಪಡೆದವರು ಖೋಟಾ ನೋಟು ಎಂದು ತಿಳಿದು ಅವುಗಳನ್ನು ಚಲಾವಣೆ ಮಾಡಿದಾಗ ಯಾವುದೇ ದೂರು ಬಾರದ ಕಾರಣ ಹೆಚ್ಚು ಹಣದಾಸೆಗೆ ಮತ್ತೆ ಬರುತ್ತಿದ್ದರು.
ಎರಡನೇ ಬಾರಿಗೆ ಹೆಚ್ಚಿನ ಹಣದೊಂದಿಗೆ ಗ್ರಾಹಕರು ಬಂದಾಗ ಆರೋಪಿ ಕಾಗದ ಕಂತೆಗಳ ಮೇಲ್ಭಾಗದಲ್ಲಿ ಒಂದಿಷ್ಟು ಹೊಸ ನೋಟು ಇಟ್ಟು ವಂಚಿಸುತ್ತಿದ್ದ. ವ್ಯವಹಾರ ನಡೆಸುವಾಗಲೇ ಆತನ ತಂಡದ ನಕಲಿ ಪೊಲೀಸರು ದಾಳಿ ಮಾಡಿದಾಗ ಎಲ್ಲರೂ ಹಣ ಬಿಟ್ಟು ಓಡಿ ಹೋಗುತ್ತಾರೆ. ಹೀಗೆ ಗ್ರಾಹಕರನ್ನು ವಂಚಿಸುತ್ತಿದ್ದ ಆರೋಪ ಚಂದ್ರಶೇಖರ್ ಮೇಲಿದೆ. ಮಂಗಳೂರು ಮೂಲದ ಗ್ರಾಹಕರೊಬ್ಬರು ಇದೇ ರೀತಿ ಹಣ ಪಡೆಯಲು ಬಂದಾಗ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

