ಹೊಸಪೇಟೆ(ವಿಜಯನಗರ ಜಿಲ್ಲೆ): ವಿಶ್ವವಿಖ್ಯಾತ ಹಂಪಿಯ ಅಷ್ಟಭುಜ ಸ್ನಾನದ ಕೊಳ ಸಮೀಪ ಗುಡ್ಡ ಹತ್ತಲು ಯತ್ನಿಸಿ ಕಾಲು ಜಾರಿ ಬಿದ್ದಿದ್ದ ಫ್ರಾನ್ಸ್ ದೇಶದ ಬ್ರೂನೋ ರೋಜರ್(52) ಎಂಬುವರನ್ನು ಎರಡು ದಿನಗಳ ನಂತರ ರಕ್ಷಿಸಿ ಕೊಪ್ಪಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಸೆಂಬರ್ 24ರಂದು ಸಂಜೆ 6 ಗಂಟೆಗೆ ಗುಡ್ಡ ಹತ್ತಲು ಯತ್ನಿಸಿದ ಬ್ರೂನೋ ರೋಜರ್ ಕಾಲು ಜಾರಿ ಬಿದ್ದಿದ್ದರು. ಆ ಸ್ಥಳ ನಿರ್ಜನ ಪ್ರದೇಶವಾಗಿದ್ದು, ಕಾಲಿಗೆ ತೀವ್ರ ಪೆಟ್ಟಾಗಿ ಗಾಯಗೊಂಡಿದ್ದರಿಂದ ಎರಡು ದಿನ ಅಲ್ಲೇ ಇದ್ದ ಬ್ರೂನೋ ರೋಜರ್ ನಂತರ ತೆವಳಿಕೊಂಡು ಸಮೀಪದ ಬಾಳೆ ತೋಟಕ್ಕೆ ಶುಕ್ರವಾರ ಬಂದಿದ್ದಾರೆ.
ಅವರನ್ನು ಗಮನಿಸಿದ ರೈತರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸಹಯೋಗದಲ್ಲಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಫ್ರಾನ್ಸ್ ನಿಂದ ಒಬ್ಬರೇ ಹಂಪಿಗೆ ಬಂದಿದ್ದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

