ಹೋಟೆಲ್, ಧಾಬಾಗಳಿಗೆ ಆಹಾರ ಸುರಕ್ಷತಾ ನಿಯಮ ಪಾಲನೆ ಕಡ್ಡಾಯ:
ಉಲ್ಲಂಘಿಸಿದರೆ ಕಠಿಣ ಕ್ರಮಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚನೆ
ಬೆಂಗಳೂರು- ರಾಜ್ಯದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಧಾಬಾಗಳು ಹಾಗೂ ಇತರೆ ಆಹಾರ ಸೇವಾ ಸಂಸ್ಥೆಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರಿಗೆ ಸೂಚಿಸಲಾಗಿದೆ.
ರಾಜ್ಯದ ವಿವಿಧೆಡೆ ಇತ್ತೀಚೆಗೆ ನಡೆದ ತಪಾಸಣೆ ಹಾಗೂ ಜಾರಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹಣೆ, ಕಳಪೆ ನೈರ್ಮಲ್ಯ, ಅಸುರಕ್ಷಿತ ಆಹಾರ ಸಂಗ್ರಹಣೆ ಹಾಗೂ ಆಹಾರ ಕಲುಷಿತಗೊಳ್ಳುವ ಸಾಧ್ಯತೆ ಇರುವ ಪರಿಸ್ಥಿತಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಲಾಖೆ ಹೊಸದಾಗಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ 2011ರ ನಿಯಮಗಳ ಅನ್ವಯ ಹೋಟೆಲ್, ಧಾಬಾ, ರೆಸ್ಟೋರೆಂಟ್ ಮತ್ತು ಇತರೆ ಆಹಾರ ಸೇವಾ ಸಂಸ್ಥೆಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ಅಧಿಕೃತ ಜ್ಞಾಪನ ಪತ್ರದ ಮೂಲಕ ಸೂಚಿಸಿದೆ.
*ಪರವಾನಗಿ ಪ್ರದರ್ಶನ ಕಡ್ಡಾಯ_*
ಆಹಾರ ವ್ಯವಹಾರದ ಪರವಾನಗಿಯನ್ನು ಸಂಸ್ಥೆಯ ಆವರಣದಲ್ಲಿ ಗ್ರಾಹಕರಿಗೆ ಸ್ಪಷ್ಟವಾಗಿ ಕಾಣುವ ಪ್ರಮುಖ ಸ್ಥಳದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಆಹಾರ ವ್ಯವಹಾರದ ಪ್ರಕ್ರಿಯೆ, ಚಟುವಟಿಕೆ ಅಥವಾ ಇತರೆ ವಿವರಗಳಲ್ಲಿ ಯಾವುದೇ ಬದಲಾವಣೆ ಮಾಡಿದಲ್ಲಿ ಸಂಬಂಧಿತ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
*ಅಡುಗೆಮನೆಯಲ್ಲಿ ಸ್ವಚ್ಛತೆಗೆ ಆದ್ಯತೆ*
ಅಡುಗೆ ಪ್ರದೇಶವನ್ನು ಸದಾ ಸ್ವಚ್ಛವಾಗಿ, ವ್ಯವಸ್ಥಿತವಾಗಿ ಹಾಗೂ ಸಮರ್ಪಕ ಗಾಳಿಯಾಡುವಂತೆ ನಿರ್ವಹಿಸಬೇಕು. ಕಚ್ಚಾ ಆಹಾರ ಪದಾರ್ಥ ತೊಳೆಯುವುದು, ಪಾತ್ರೆ ತೊಳೆಯುವುದು ಮತ್ತು ಅಡುಗೆ ಉಪಕರಣಗಳನ್ನು ಸ್ವಚ್ಛಗೊಳಿಸುವುದಕ್ಕೆ ಸಾಧ್ಯವಾದಷ್ಟು ಪ್ರತ್ಯೇಕ ಸಿಂಕ್‌ಗಳನ್ನು ಬಳಸಬೇಕು.
ಅಡುಗೆಗೆ ಬಳಸುವ ಪಾತ್ರೆಗಳು, ಉಪಕರಣಗಳು, ಕ್ರಾಕರಿ ಮತ್ತು ಕಟ್ಟರಿಗಳನ್ನು ಡಿಟರ್ಜೆಂಟ್ ಹಾಗೂ ಬಿಸಿ ನೀರಿನಿಂದ ಸಮರ್ಪಕವಾಗಿ ಸ್ವಚ್ಛಗೊಳಿಸಬೇಕು. ಗೋಡೆ, ನೆಲ, ಮೇಲ್ಛಾವಣಿ ಉತ್ತಮ ಸ್ಥಿತಿಯಲ್ಲಿರಬೇಕು. ಉದುರುವ ಬಣ್ಣ, ಬಿರುಕುಗಳು ಅಥವಾ ನೇತಾಡುವ ವಿದ್ಯುತ್ ತಂತಿಗಳಂತಹ ಅಪಾಯಕಾರಿ ಪರಿಸ್ಥಿತಿಗಳಿಗೆ ಅವಕಾಶ ನೀಡಬಾರದು.
ಧೂಳು, ನೊಣ ಹಾಗೂ ಇತರೆ ಕೀಟಗಳ ಪ್ರವೇಶ ತಡೆಯಲು ಕಿಟಕಿ ಮತ್ತು ಬಾಗಿಲುಗಳಿಗೆ ಅಗತ್ಯವಿರುವಲ್ಲಿ ಮೆಶ್ ಅಥವಾ ಏರ್‌ಕರ್ಟನ್ ಅಳವಡಿಸಬೇಕು. ಪ್ರತ್ಯೇಕ ಕೈತೊಳೆಯುವ ಸಿಂಕ್, ಸಾಬೂನು ಮತ್ತು ಶುದ್ಧ ಹರಿಯುವ ನೀರಿನ ವ್ಯವಸ್ಥೆ ಇರಬೇಕು.
*ಅವಧಿ ಮೀರಿದ ಆಹಾರಕ್ಕೆ ಕಡಿವಾಣ*
ಹೋಟೆಲ್‌ಗಳು ಮತ್ತು ಆಹಾರ ಸೇವಾ ಸಂಸ್ಥೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹಣೆ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ತಡೆಯಬೇಕು. ಹಾಳಾದ ಹಣ್ಣು-ತರಕಾರಿ, ಶಿಲೀಂಧ್ರ ಕಾಣಿಸಿಕೊಂಡಿರುವ ಆಹಾರ ಅಥವಾ ಬಳಕೆಗೆ ಯೋಗ್ಯವಲ್ಲದ ಯಾವುದೇ ಆಹಾರವನ್ನು ತಕ್ಷಣ ವಿಲೇವಾರಿ ಮಾಡಬೇಕು.
ಕಚ್ಚಾ ಮಾಂಸ, ಮೀನು, ಸೀಫುಡ್ ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಕ್ರಾಸ್-ಕಂಟಾಮಿನೇಷನ್ ಆಗದಂತೆ ಎಚ್ಚರಿಕೆ ವಹಿಸಬೇಕು. ಆಹಾರ ಪದಾರ್ಥಗಳನ್ನು ಸೂಕ್ತವಾಗಿ ಮುಚ್ಚಿ ಹಾಗೂ ಅಗತ್ಯ ತಾಪಮಾನದಲ್ಲಿ ಸಂಗ್ರಹಿಸಬೇಕು.
ಬಿಸಿ ಆಹಾರ 60°Cಕ್ಕಿಂತ ಹೆಚ್ಚು, ತಣ್ಣನೆಯ ಆಹಾರ 5°Cಕ್ಕಿಂತ ಕಡಿಮೆ
ಆಹಾರವನ್ನು ಸಂಪೂರ್ಣವಾಗಿ ಬೇಯಿಸಿ ಸುರಕ್ಷಿತವಾಗಿ ಸಂಗ್ರಹಿಸುವಂತೆ ಸೂಚಿಸಲಾಗಿದೆ.
*ತಣ್ಣನೆಯ ಆಹಾರವನ್ನು* *5°Cಕ್ಕಿಂತ ಕಡಿಮೆ ತಾಪಮಾನದಲ್ಲಿ ಹಾಗೂ ಬಿಸಿ ಆಹಾರವನ್ನು 60°Cಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ಇಡಬೇಕು.*
ಫ್ರೋಜನ್ ಆಹಾರ ಪದಾರ್ಥಗಳನ್ನು -18°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು.
ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ತಯಾರಿಕೆಯನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಎರಡಕ್ಕೂ ಪ್ರತ್ಯೇಕ ಕತ್ತರಿಸುವ ಫಲಕ, ಚಾಕು ಮತ್ತು ಪಾತ್ರೆಗಳನ್ನು ಬಳಸಬೇಕು. ತಯಾರಾದ ಆಹಾರವನ್ನು ಸಹ ಪ್ರತ್ಯೇಕವಾಗಿ ಸಂಗ್ರಹಿಸಬೇಕು.
*ಬಳಸಿದ ಅಡುಗೆ ಎಣ್ಣೆ ಮರುಬಳಕೆ ಮಾಡಿದರೆ ಕ್ರಮ*
ಬಳಸಿದ ಅಡುಗೆ ಎಣ್ಣೆಯನ್ನು ಅನಧಿಕೃತವಾಗಿ ಮರುಬಳಕೆ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ಬಳಸಿದ ಎಣ್ಣೆಯನ್ನು ಅನುಮೋದಿತ ಮಾರ್ಗಗಳ ಮೂಲಕವೇ ವಿಲೇವಾರಿ ಮಾಡಬೇಕು. ಆಹಾರ ತ್ಯಾಜ್ಯವನ್ನು ಅಡುಗೆ ಪ್ರದೇಶದಲ್ಲಿ ದೀರ್ಘಕಾಲ ಸಂಗ್ರಹಿಸಿಡಬಾರದು.
ಅಸುರಕ್ಷಿತ ಕೃತಕ ಬಣ್ಣಗಳು ಅಥವಾ ಅನುಮತಿಯಿಲ್ಲದ ಆಹಾರ ಸೇರ್ಪಡೆಗಳನ್ನು ಬಳಸುವುದಕ್ಕೂ ನಿರ್ಬಂಧವಿದ್ದು, ಆಹಾರ ಉತ್ಪನ್ನಗಳ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಬೇಕು.
*ಸಿಬ್ಬಂದಿಯ ಆರೋಗ್ಯ ಮತ್ತು ವೈಯಕ್ತಿಕ ನೈರ್ಮಲ್ಯ*
ಆಹಾರ ನಿರ್ವಹಿಸುವ ಸಿಬ್ಬಂದಿ ಸ್ವಚ್ಛ ಸಮವಸ್ತ್ರ, ಹೇರ್‌ನೆಟ್ ಅಥವಾ ತಲೆಕವಚ ಹಾಗೂ ಅಗತ್ಯವಿರುವಲ್ಲಿ ಮಾಸ್ಕ್ ಮತ್ತು ಏಪ್ರನ್ ಧರಿಸಬೇಕು. ಕೈ ಮತ್ತು ಉಗುರುಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು.
ಅಡುಗೆ ಹಾಗೂ ಆಹಾರ ಸೇವಾ ಸಿಬ್ಬಂದಿಯ ವೈದ್ಯಕೀಯ ಫಿಟ್ನೆಸ್ ದಾಖಲೆಗಳನ್ನು ನವೀಕರಿಸಿ ನಿರ್ವಹಿಸಬೇಕು. ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕ್ರಮಗಳ ಮೇಲ್ವಿಚಾರಣೆಗೆ ತರಬೇತಿ ಪಡೆದ FoSTaC Food Safety Supervisor ಅನ್ನು ನಿಯೋಜಿಸುವಂತೆಯೂ ಸೂಚಿಸಲಾಗಿದೆ.
*ಆಹಾರ ಸಾಗಣೆಗೂ ನಿಯಮ*
ಆಹಾರ ಸಾಗಿಸುವ ವಾಹನ ಹಾಗೂ ಸಾರಿಗೆ ವ್ಯವಸ್ಥೆ ಸ್ವಚ್ಛ ಮತ್ತು ನೈರ್ಮಲ್ಯಯುತವಾಗಿರಬೇಕು. ಸಾಧ್ಯವಾದಷ್ಟು ಆಹಾರ ಸಾಗಣೆಗೆ ಮಾತ್ರ ವಾಹನಗಳನ್ನು ಬಳಸಬೇಕು. ಸಾಗಣೆ ಅವಧಿಯನ್ನು ಕಡಿಮೆಗೊಳಿಸುವುದರ ಜೊತೆಗೆ ಅಗತ್ಯವಿರುವ ತಾಪಮಾನವನ್ನು ಕಾಪಾಡಬೇಕು.
ಪ್ಯಾಕೇಜ್ ಮಾಡಿದ ಆಹಾರ, ಬಾಟಲಿ ಪಾನೀಯಗಳು, ಪ್ಯಾಕೇಜ್ ಮಾಡಿದ ಹಾಲು ಮತ್ತು ಕ್ಯಾನ್ ಆಹಾರಗಳ ಪ್ಯಾಕಿಂಗ್ ಹಾಗೂ ಸೀಲ್‌ಗಳು ಹಾನಿಯಾಗದಂತೆ ಸಾಗಣೆ ಮಾಡುವ ಜವಾಬ್ದಾರಿ ಆಹಾರ ವ್ಯವಹಾರ ನಿರ್ವಾಹಕರದ್ದಾಗಿದೆ.
**ಕುಡಿಯುವ ನೀರು* *ಉಚಿತವಾಗಿ ನೀಡಬೇಕು*
ಅಡುಗೆ, ಆಹಾರ ತಯಾರಿಕೆ, ಪಾತ್ರೆ ತೊಳೆಯುವುದು ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಸುರಕ್ಷಿತ ಮತ್ತು ಕುಡಿಯಲು ಯೋಗ್ಯವಾದ ನೀರನ್ನು ಮಾತ್ರ ಬಳಸಬೇಕು. ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ ದಾಖಲೆಗಳನ್ನು ನಿರ್ವಹಿಸಬೇಕು.
ಹೋಟೆಲ್‌ಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಉಚಿತವಾಗಿ ಒದಗಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರ ಬಳಕೆಗೆ ಅಗತ್ಯವಿರುವ ಬಿಸಿ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
*ಗ್ರಾಹಕರಿಗೆ ಶೌಚಾಲಯದ ಉಚಿತ ಬಳಕೆ*
ಹೋಟೆಲ್‌ಗೆ ಭೇಟಿ ನೀಡುವ ಸಾರ್ವಜನಿಕರಿಗೆ ಶೌಚಾಲಯದ ಉಚಿತ ಬಳಕೆಗೆ ಅವಕಾಶ ಕಲ್ಪಿಸಬೇಕು. ಹೋಟೆಲ್ ಕಾರ್ಯನಿರ್ವಹಿಸುವ ಅವಧಿಯಲ್ಲಿ ಶೌಚಾಲಯ ಸ್ವಚ್ಛವಾಗಿರಬೇಕು. ಸಮರ್ಪಕ ನೀರು, ಸಾಬೂನು ಹಾಗೂ ಕೈತೊಳೆಯುವ ವ್ಯವಸ್ಥೆ ಕಡ್ಡಾಯವಾಗಿರಬೇಕು.
*ಕೀಟ ನಿಯಂತ್ರಣಕ್ಕೆ ವಿಶೇಷ ಒತ್ತು*
ಅಡುಗೆಮನೆ ಮತ್ತು ಆಹಾರ ಸಂಗ್ರಹಣಾ ಪ್ರದೇಶಗಳಲ್ಲಿ ನೊಣ, ಜಿರಳೆ, ಇಲಿಗಳು ಹಾಗೂ ಇತರೆ ಕೀಟಗಳು ಪ್ರವೇಶಿಸದಂತೆ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ನಿಯಮಿತವಾಗಿ ಪೆಸ್ಟ್ ಕಂಟ್ರೋಲ್ ನಡೆಸಿ ಅದರ ದಾಖಲೆಗಳನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ.
*ತಪಾಸಣೆ ಮತ್ತಷ್ಟು ಕಠಿಣವಾಗುವ ಸಾಧ್ಯತೆ*
ರಾಜ್ಯದ ವಿವಿಧ ಆಹಾರ ಸೇವಾ ಸಂಸ್ಥೆಗಳಲ್ಲಿ ಇತ್ತೀಚೆಗೆ ನಡೆದ ತಪಾಸಣೆಗಳ ಸಂದರ್ಭದಲ್ಲಿ ಪತ್ತೆಯಾದ ಲೋಪದೋಷಗಳ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಮುಂದಿನ ದಿನಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್, ಧಾಬಾ, ರೆಸ್ಟೋರೆಂಟ್‌ಗಳು ಸೇರಿದಂತೆ ವಿವಿಧ ಆಹಾರ ಸೇವಾ ಕೇಂದ್ರಗಳಲ್ಲಿ ತಪಾಸಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಸಾಧ್ಯತೆ ಇದೆ.
ವಿಶೇಷವಾಗಿ ಅವಧಿ ಮೀರಿದ ಆಹಾರ, ಕಳಪೆ ನೈರ್ಮಲ್ಯ, ಅಸುರಕ್ಷಿತ ನೀರು, ಆಹಾರ ಕಲುಷಿತಗೊಳ್ಳುವಿಕೆ, ಕೀಟಗಳ ನಿಯಂತ್ರಣದ ಕೊರತೆ, ತಪ್ಪಾದ ತಾಪಮಾನದಲ್ಲಿ ಆಹಾರ ಸಂಗ್ರಹಣೆ ಮತ್ತು ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯ ಉಲ್ಲಂಘನೆ ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ.
*ಗ್ರಾಹಕರ ಆರೋಗ್ಯದ ಜತೆ ರಾಜಿ ಇಲ್ಲ*
ಆಹಾರ ಸೇವಾ ಸಂಸ್ಥೆಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಪರಿಸ್ಥಿತಿಗೆ ಅವಕಾಶ ನೀಡಬಾರದು ಎಂಬುದು ಆರೋಗ್ಯ ಇಲಾಖೆಯ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ನಿಯಮಗಳನ್ನು ಕೇವಲ ಜ್ಞಾಪನ ಪತ್ರದ ಮಟ್ಟಿಗೆ ಸೀಮಿತಗೊಳಿಸದೆ, ನೆಲಮಟ್ಟದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ.
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಸಾರ್ವಜನಿಕರಿಗೆ ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ದೊರೆಯುವಂತೆ ನೋಡಿಕೊಳ್ಳುವುದು ಇಲಾಖೆಯ ಪ್ರಮುಖ ಆದ್ಯತೆಯಾಗಿದೆ.

