ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಬೆನ್ನಲ್ಲೇ ಠಾಣಾ ಮಟ್ಟದಲ್ಲಿ ರೌಡಿ ನಿಗ್ರಹ ಪಡೆ ರಚಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ
ಸಿಎಂ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಹಿರಿಯ ಐಪಿಎಸ್ ಅಧಿಕಾರಿಗಳ ಸಭೆ ನಡೆಸಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ರೌಡಿಗಳ ನಿಯಂತ್ರಣಕ್ಕೆ ಪ್ರತ್ಯೇಕ ಪಡೆ ರಚಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕೆಂದು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಲೀಂ ಅವರು ಠಾಣಾ ಮಟ್ಟದಲ್ಲಿ ರೌಡಿ ನಿಗ್ರಹ ಪಡೆ ರಚಿಸಲು ಆದೇಶಿಸಿದ್ದಾರೆ.
ಪ್ರತಿ ವೃತ್ತ ಮತ್ತು ಪೊಲೀಸ್ ಠಾಣಾ ಹಂತದಲ್ಲಿ ರೌಡಿ ನಿಗ್ರಹ ಪಡೆಯುವ ಸ್ಥಾಪಿಸುವಂತೆ ಮಾರ್ಗಸೂಚಿ ಹೊರಡಿಸಿದ್ದಾರೆ. ರೌಡಿ ಚಟುವಟಿಕೆಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತವೆ. ಶಾಂತಿಗೆ ಧಕ್ಕೆ ಉಂಟು ಮಾಡುತ್ತವೆ. ಹೀಗಾಗಿ ಕರ್ನಾಟಕ ಪೊಲೀಸ್ ಕೈಪಿಡಿ ಅನ್ವಯ ರೌಡಿ ಅಂಶಗಳ ಗುರುತಿಸುವಿಕೆ, ಸಾರ್ವಜನಿಕ ಶಾಂತಿ ಕಾಪಾಡುವ ಅಗತ್ಯವಿದೆ. ಆದ್ದರಿಂದ ಠಾಣಾ ಮಟ್ಟದಲ್ಲಿ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ರೌಡಿ ನಿಗ್ರಹ ಪಡೆ ರಚಿಸಬೇಕು ಎಂದು ಸೂಚನೆ ನೀಡಿದ್ದಾರೆ.
ರೌಡಿ ನಿಗ್ರಹ ಪಡೆ ರಚಿಸಿ ಆಯಾ ವಿಭಾಗದ ಇನ್ಸ್ಪೆಕ್ಟರ್ ಮೇಲ್ವಿಚಾರಣೆ ಮಾಡಬೇಕು. ರೌಡಿಗಳ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳ ಪರಿಶೀಲನೆ, ರೌಡಿ ಪಟ್ಟಿಗೆ ಹೊಸ ಹೆಸರು ಸೇರ್ಪಡೆ ಮಾಡುವುದು ರೌಡಿ ನಿಗ್ರಹ ಪಡೆಯ ಜವಾಬ್ದಾರಿಯಾಗಿದೆ. ಸಮಾಜಘಾತುಕ ಶಕ್ತಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಲೋಪ ದೋಷ ಕಂಡು ಬಂದಲ್ಲಿ ಮುಖ್ಯಸ್ಥರನ್ನು ಹೊಣೆ ಮಾಡಲಾಗುವುದು. ಬೆದರಿಕೆ, ಬಲವಂತದ ಹಣ ವಸೂಲಿ, ಆಶಾಂತಿ ಸೃಷ್ಟಿಸುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಕಾರ್ಯಚರಣೆ ನಡೆಸಬೇಕು ಎಂದು ಹೇಳಲಾಗಿದೆ.

