ಹುಬ್ಬಳ್ಳಿ: ಫ್ಲೈ 91 ಪ್ರಾದೇಶಿಕ ವಿಮಾನಯಾನ ಸಂಸ್ಥೆಯು ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಹೈದರಾಬಾದ್ ಗೆ ಶುಕ್ರವಾರದಿಂದ ವಿಮಾನ ಸಂಚಾರ ಸೇವೆ ಆರಂಭಿಸಿದೆ.
ಪ್ರತಿದಿನ ರಾತ್ರಿ 8.35ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ ರಾತ್ರಿ 9:55 ಕ್ಕೆ ಹೈದರಾಬಾದ್ ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್ ನಿಂದ ಹೊರಟು ಸಂಜೆ 4:30ಕ್ಕೆ ಹುಬ್ಬಳ್ಳಿ ತಲುಪಲಿದೆ.
ಹುಬ್ಬಳ್ಳಿಯಿಂದ ಪ್ರತಿದಿನ ಸಂಜೆ 4:35ಕ್ಕೆ ಹೊರಡುವ ವಿಮಾನ ಸಂಜೆ 6.15ಕ್ಕೆ ಬೆಂಗಳೂರು ತಲುಪಲಿದೆ. ಸಂಜೆ 6.15ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 8:15ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.
ಉತ್ತರ ಕರ್ನಾಟಕದ ಪ್ರಮುಖ ವ್ಯಾಪಾರ, ಶಿಕ್ಷಣ ಮತ್ತು ಕೈಗಾರಿಕಾ ಕೇಂದ್ರವಾಗಿರುವ ಹುಬ್ಬಳ್ಳಿಯಿಂದ ಹೈದರಾಬಾದ್ ಮತ್ತು ಬೆಂಗಳೂರಿನಂತಹ ನಗರಗಳಿಗೆ ವಿಮಾನ ಸಂಪರ್ಕ ವ್ಯಾಪಾರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಫ್ಲೈ 91 ವಿಮಾನಯಾನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಚಾಕೊ ಹೇಳಿದ್ದಾರೆ.
ಎರಡು ಮತ್ತು ಮೂರನೇ ಹಂತದ ನಗರಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಫ್ಲೈ91 ವಿಮಾನಯಾನ ಸಂಸ್ಥೆಯ ಹುಬ್ಬಳ್ಳಿಯಿಂದ ಕಾರ್ಯಾಚರಣೆ ಆರಂಭಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

