ಹುಬ್ಬಳ್ಳಿ: ಫ್ಲೈ 91 ವಿಮಾನಕ್ಕೆ ಹುಬ್ಬಳ್ಳಿಯಲ್ಲಿ ಮತ್ತೆ ಲ್ಯಾಂಡಿಂಗ್ ಸಮಸ್ಯೆ ಉಂಟಾಗಿದ್ದು, 40 ನಿಮಿಷಗಳ ಕಾಲ ಆಗಸದಲ್ಲಿಯೇ ಹಾರಾಟ ನಡೆಸಿದ ಘಟನೆ ನಡೆದಿದೆ.
ಏ.25ರಂದು ಮಧ್ಯಾಹ್ನ 3.13ಕ್ಕೆ ಹೈದರಾಬಾದ್ನಿಂಗ ಹೊರಟಿದ್ದ ವಿಮಾನ ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಆಗಸದಲ್ಲಿಯೇ ಕೆಲ ಸಮಯ ವಿಮಾನ ಸುತ್ತುಹೊಡೆದಿದೆ. 40 ನಿಮಿಷಗಳ ಕಾಲ ಆಗಸದಲ್ಲಿ ಹಾರಾಡಿ ಸಂಜೆ 5.09ಕ್ಕೆ ಫ್ಲೈ 91 ಸಂಸ್ಥೆಯ ಜಿಒಎ 3401 ಪ್ಲೈಟ್ ಲ್ಯಾಂಡ್ ಆಗಿದೆ.
ಫ್ಲೈ 91 ವಿಮಾನಕ್ಕೆ ಕಳೆದ ಒಂದು ವಾರದ ಅವಧಿಯಲ್ಲಿ ನಡೆದ ಮೂರನೇ ಘಟನೆ ಇದಾಗಿದೆ. ಫೆ. 19ರಂದು ಹೈದರಾಬಾದ್ನಿಂದ ಹುಬ್ಬಳ್ಳಿ ಏರ್ಪೋರ್ಟ್ಗೆ ಬರುತ್ತಿದ್ದ ಫ್ಲೈಟ್ ಏಕಾಏಕಿ ವೇಗದ ನಿಯಂತ್ರಣ ಕಳೆದುಕೊಂಡು 4 ಗಂಟೆ ಆಗಸದಲ್ಲೇ ಹಾರಾಡಿತ್ತು. ಬಳಿಕ 4 ಗಂಟೆ ತಡವಾಗಿ ಬೆಂಗಳೂರಿನಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲಾಗಿತ್ತು. ಹವಾಮಾನ ವೈಪರೀತ್ಯ ಹಿನ್ನೆಲೆ ಲ್ಯಾಂಡಿಂಗ್ ಸಮಸ್ಯೆಯಾಗಿದೆ ಎಂದು ಹೇಳಲಾಗಿತ್ತಾದರೂ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ ಎಂಬ ಆರೋಪಗಳೂ ಕೇಳಿಬಂದಿದ್ದವು.
ಫೆ.21ರಂದು ಕೂಡ ಇದೇ ರೀತಿಯ ಸಮಸ್ಯೆ ಫ್ಲೈ 91 ವಿಮಾನಕ್ಕೆ ಆಗಿತ್ತು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ವಿಮಾನದ ಲ್ಯಾಂಡಿಂಗ್ ವೇಳೆ ಸಮಸ್ಯೆ ಆಗಿತ್ತು. ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ ಫ್ಲೈಟ್ ರಾತ್ರಿ 8.15ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ 1 ಗಂಟೆ ಸುತ್ತಾಟ ಬಳಿಕ ರಾತ್ರಿ 9.15ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ಈ ಬಾರಿಯೂ ಹವಾಮಾನ ವೈಪರೀತ್ಯದಿಂದ ಸಮಸ್ಯೆ ಆಗಿದ್ದು, ವಿಮಾನ 40 ನಿಮಿಷಗಳ ಹಾರಾಟದ ಬಳಿಕ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಫ್ಲೈ 91 ವಿಮಾನಕ್ಕೆ ಪದೇ ಪದೇ ಈ ಸಮಸ್ಯೆಗೆ ನಿಖರ ಕಾರಣವೇನು? ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಮತ್ತೊಂದೆಡೆ ಘಟನೆ ಬಗ್ಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಪ್ರಯಾಣಿಕರು ಏರ್ಲೈನ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

