ಚಾಮರಾಜನಗರ: ಹೆತ್ತ ಮಗುವನ್ನೇ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಿದ್ದ ತಂದೆ, ತಾಯಿ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಹೆಣ್ಣು ಮಗು ಎಂಬ ಕಾರಣಕ್ಕೆ ತಂದೆ, ತಾಯಿ ಮಧ್ಯವರ್ತಿಗಳ ಮೂಲಕ ಮಗು ಮಾರಾಟ ಮಾಡಿದ್ದ ಪ್ರಕರಣ ತಡವಾಗಿ ಬಳಕೆಗೆ ಬಂದಿದ್ದು, ಚಾಮರಾಜನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ಜುಲೈನಲ್ಲಿ ಮಾರಾಟವಾಗಿದ್ದ ಹೆಣ್ಣು ಮಗುವನ್ನು ಪತ್ತೆ ಮಾಡಿ ಆರೈಕೆ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಚಾಮರಾಜನಗರದ ರಾಮಸಮುದ್ರ ಬಡಾವಣೆಯ ಮಂಜುನಾಯಕ್, ಸಿಂಧೂ, ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ ಶಾಂತಾ, ಹಾಸನ ಜಿಲ್ಲೆ ಕೊಣನೂರು ಗ್ರಾಮದ ಜವರಯ್ಯ ಮತ್ತು ನೇತ್ರಾ ಬಂಧಿತ ಆರೋಪಿಗಳು.
ಸಿಂಧೂ ಮತ್ತು ಮಂಜುನಾಯಕ್ ದಂಪತಿಗೆ 2025ರ ಜುಲೈ 26ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಆದರೆ ಪೋಷಕರ ಬಳಿ ಮಗು ಇರಲಿಲ್ಲ. ಮಗು ಮಾರಾಟವಾಗಿರುವ ಬಗ್ಗೆ 2025ರ ಸೆಪ್ಟೆಂಬರ್ 15ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಮಗುವಿನ ಪೋಷಕರನ್ನು ಜನವರಿ 23ರಂದು ಪತ್ತೆ ಮಾಡಿ ವಿಚಾರಣೆ ನಡೆಸಿದ್ದಾರೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಶಾಂತಾ ಮೂಲಕ ಕೊಣನೂರು ಗ್ರಾಮದ ಜವರಯ್ಯ, ನೇತ್ರಾ ದಂಪತಿಗೆ 50 ಸಾವಿರ ರೂಪಾಯಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಐವರನ್ನು ಬಂಧಿಸಲಾಗಿದೆ.

