ನವದೆಹಲಿ: ನೀಟ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕಾಕ್‌ರೋಚ್ ಜನತಾ ಪಾರ್ಟಿ (CJP) ತನ್ನ ಹೋರಾಟದಲ್ಲಿ ಮೊದಲ ಯಶಸ್ಸು ಸಾಧಿಸಿದೆ.
ಇಲ್ಲಿಯವರೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಿಜೆಪಿ, ಇಂದು ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ‘ಸಂಸತ್ ಚಲೋ’ ಮೆರವಣಿಗೆಗೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಿದೆ.
‘ದಿ ಹಿಂದೂ’ ವರದಿ ಪ್ರಕಾರ, ಕೇಂದ್ರದ ಪರವಾಗಿ ನವದೆಹಲಿ ಡಿಸಿಪಿ ಸಚಿನ್ ಶರ್ಮಾ ಅವರು ಸಿಜೆಪಿ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿ, ಬಳಿಕ ಕೇಂದ್ರ ಸರ್ಕಾರದ ಕಾರ್ಯದರ್ಶಿ ಅಥವಾ ಕೇಂದ್ರ ಸಹಾಯಕ ಸಚಿವರ ಮಟ್ಟದಲ್ಲಿ ಮಾತುಕತೆ ನಡೆಸುವ ಪ್ರಸ್ತಾಪ ಬಂದಿದ್ದರೂ, ಪ್ರಧಾನಿ ಅಥವಾ ಕೇಂದ್ರ ಸಚಿವ ಸಂಪುಟದ ಸಚಿವರ ಮಟ್ಟದಲ್ಲೇ ಮಾತುಕತೆ ನಡೆಸಬೇಕು ಎಂದು ಸಿಜೆಪಿ ನಾಯಕರು ಆಗ್ರಹಿಸಿ ಆ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದರು. ಇದಲ್ಲದೆ, ಮಾತುಕತೆಗೆ ಭಾಗವಹಿಸಬೇಕಾದ ಕೇಂದ್ರ ಸಚಿವರ ಪಟ್ಟಿಯನ್ನೂ ಸಿಜೆಪಿ ನಾಯಕರು ಡಿಸಿಪಿಗೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಇದೇ ವೇಳೆ, ಸಿಜೆಪಿ ಮುಖಂಡರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಇಂದು ಬೆಳಿಗ್ಗೆಯೇ ಸರ್ಕಾರದಿಂದ ಮಾತುಕತೆಗೆ ಸಂಪರ್ಕಿಸಲಾಗಿದೆ ಎಂದು ಅವರು ಹೇಳಿದ್ದಾರೆ.”ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ. ದೇಶದ ವಿವಿಧ ಭಾಗಗಳಿಂದ ಯುವಕರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದಾರೆ,” ಎಂದು ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಇದರೊಂದಿಗೆ, ಸಿಜೆಪಿ ಮತ್ತು ಕೇಂದ್ರ ಸರ್ಕಾರದ ನಡುವೆ ಶೀಘ್ರದಲ್ಲೇ ಮಾತುಕತೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಸಭೆ ನಡೆಯುವ ನಿಖರ ಸಮಯದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.

