ಬೆಂಗಳೂರು: ಖಗೋಳ ಪ್ರಿಯರೇ ಗಮನಿಸಿ, 2026ರ ಮೊದಲ ಸೌರ ಕೌತುಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 17ರಂದು ಆಕಾಶದಲ್ಲಿ ರಿಂಗ್ ಆಫ್ ಫೈರ್(Ring of Fire) ಖ್ಯಾತಿಯ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ವಿಜ್ಞಾನಿಗಳು ಈ ವಿದ್ಯಮಾನವನ್ನು ವೀಕ್ಷಿಸಲು ಕಾತರರಾಗಿದ್ದರೆ, ಭಾರತದಲ್ಲಿ ಇದರ ಪರಿಣಾಮವೇನು ಎಂಬ ಚರ್ಚೆಗಳು ಶುರುವಾಗಿವೆ.
ಏನಿದು ಕಂಕಣ ವಿಶೇಷ?
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಆದರೆ ಚಂದ್ರನು ಭೂಮಿಯಿಂದ ತುಸು ದೂರವಿದ್ದಾಗ, ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಲು ಅವನಿಗೆ ಸಾಧ್ಯವಾಗುವುದಿಲ್ಲ. ಈ ವೇಳೆ ಸೂರ್ಯನ ಸುತ್ತಲೂ ಚಿನ್ನದ ಉಂಗುರದಂತೆ ಬೆಳಕು ಕಾಣಿಸುತ್ತದೆ. ಇದನ್ನೇ ಕಂಕಣ ಸೂರ್ಯಗ್ರಹಣ ಅಥವಾ ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ.
ಗ್ರಹಣದ ಸಮಯ ಹಾಗೂ ಅವಧಿ:
ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣದ ಸಂಪೂರ್ಣ ಪ್ರಕ್ರಿಯೆ ಸುಮಾರು 4 ಗಂಟೆ 32 ನಿಮಿಷಗಳ ಕಾಲ ಇರಲಿದೆ.
ಗ್ರಹಣದ ಆರಂಭ: ಮಧ್ಯಾಹ್ನ 3:26ಕ್ಕೆ
ಗರಿಷ್ಠ ಹಂತ (ರಿಂಗ್ ಆಫ್ ಫೈರ್): ಸಂಜೆ 5:42ಕ್ಕೆ (ಸುಮಾರು 2 ನಿಮಿಷ 20 ಸೆಕೆಂಡ್ ಕಾಲ)
ಗ್ರಹಣ ಮುಕ್ತಾಯ: ಸಂಜೆ 7:57ಕ್ಕೆ
ಭಾರತದಲ್ಲಿ ಕಾಣಿಸುತ್ತಾ ಈ ಅಪರೂಪದ ದೃಶ್ಯ?
ದುರದೃಷ್ಟವಶಾತ್, ಈ ಬಾರಿ ಭಾರತೀಯರಿಗೆ ಈ ದೃಶ್ಯ ಕಾವ್ಯವನ್ನು ನೇರವಾಗಿ ವೀಕ್ಷಿಸುವ ಅವಕಾಶವಿಲ್ಲ. ಭಾರತ ಮಾತ್ರವಲ್ಲದೆ ಏಷ್ಯಾದ ಬಹುತೇಕ ರಾಷ್ಟ್ರಗಳಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ.
ಎಲ್ಲಿ ಗೋಚರ?: ಅಂಟಾರ್ಕ್ಟಿಕಾದಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣಿಸಲಿದ್ದು, ಅರ್ಜೆಂಟೀನಾ ಹಾಗೂ ದಕ್ಷಿಣ ಆಫ್ರಿಕಾದ ಕೆಲವು ಭಾಗಗಳಲ್ಲಿ ಭಾಗಶಃ ಗೋಚರಿಸಲಿದೆ.
ಸೂತಕದ ಆಚರಣೆ ಅಗತ್ಯವಿದೆಯೇ?
ಗ್ರಹಣವು ಭಾರತದಲ್ಲಿ ಗೋಚರಿಸದ ಕಾರಣ, ಯಾವುದೇ ರೀತಿಯ ಸೂತಕ ಅಥವಾ ಧಾರ್ಮಿಕ ನಿಯಮಗಳನ್ನು ಪಾಲಿಸುವ ಅವಶ್ಯಕತೆಯಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದರೂ, ವಿಜ್ಞಾನ ಆಸಕ್ತರು ಈ ವಿದ್ಯಮಾನವನ್ನು ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ನಾಸಾ (NASA) ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇದರ ನೇರ ಪ್ರಸಾರ ಮಾಡುವ ಸಾಧ್ಯತೆಯಿದೆ.

