ಕೊಪ್ಪಳದಲ್ಲಿ ಅಡ್ಡಪಲ್ಲಕ್ಕಿ ಉತ್ಸವದ ವೇಳೆ ಶೋಕಿ ಮಾಡಲು ಗುಂಡು ಹಾರಿಸಿದ್ದ ಬಸನಗೌಡ ಪಾಟೀಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗುಂಡು ಹಾರಿಸಲು ಬಳಕೆ ಮಾಡಿದ್ದ ಪಿಸ್ತೂಲ್ ಸಹ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಪ್ರಕಟಣೆ ಮೂಲಕ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಪ್ಪಳ ಎಸ್‌ಪಿ ಡಾ. ರಾಮ್.ಎಲ್ ಅರಸಿದ್ದಿ ಸಾಮಾಜಿಕ ಜಾಲತಾಣದ ಮೇಲೆ ಸೂಕ್ತ ನಿಗಾವಹಿಸಲು (ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್) ಸಾಮಾಜಿಕ ಜಾಲ ತಾಣದ ಪರಿಶೀಲನಾ ಘಟಕ ರಚಿಸಿದ್ದಾರೆ.
ಘಟಕದ ಕಾರ್ಯ ನಿರ್ವಹಣೆ ಸಮಯದಲ್ಲಿ ಯಲಬುರ್ಗಾ ಪಟ್ಟಣದಲ್ಲಿ ದಿನಾಂಕ 28-01-2026ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಶ್ರೀಧರ ಮುರಡಿ ಹಿರೇಮಠದ ಹತ್ತಿರ ಮಠದ ಅಡ್ಡ ಪಲ್ಲಕಿ ಮಹೋತ್ಸವ ಚಾಲನೆ ಮಾಡುವಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿದ್ದ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದ.
ತನ್ನ ಬಗ್ಗೆ ಜನರಿಗೆ ಭಯದ ವಾತಾವರಣ ನಿರ್ಮಾಣ ಮಾಡಿ, ಜೀವಕ್ಕೆ ಅಪಾಯವನ್ನುಂಟು ಮಾಡುವ ಉದ್ದೇಶದಿಂದ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಾರ್ವಜನಿಕರಿಗೆ ಶಾಂತಿ ಭಂಗ ಹಾಗೂ ಜೀವ ಹಾನಿ ಉಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ, ಸದರಿ ಮಾಹಿತಿಯನ್ನು ಎಸ್‌ಪಿ ಅವರ ಗಮನಕ್ಕೆ ತರಲಾಗಿತ್ತು.
ಆಗ ಎಸ್‌ಪಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು. ದಿನಾಂಕ 20-02-2026ರಂದು ಸ್ವಯಂ ದೂರು ಅಡಿಯಲ್ಲಿ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಕಲಂ;125 ಬಾರತೀಯ ನ್ಯಾಯ ಸಂಹಿತೆ ಕಾಯ್ದೆ-2023 ಹಾಗೂ ಕಲಂ:25(1)(ಎ), 25(9), 27 ಆರ್ಮ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿತನು ತಪ್ಪು ಒಪ್ಪಿಕೊಂಡಿದ್ದ.
ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿಸಿದ ಸಂಶಯಾಸ್ಪದ ಕಪ್ಪು ಬಣ್ಣದ 6 ಚೆಂಬರ್ ಇರುವಂತ ರಿವಾಲ್ವಾರ್ ಹಾಗೂ 5 ಸಂಶಯಾಸ್ಪದ Fired Cartridges ಮತ್ತು Six Live Cartridges ಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ.

