ಭಾರತೀಯ ಹಬ್ಬಗಳು, ಮದುವೆ ಹಾಗೂ ಪೂಜಾ ಸಮಾರಂಭಗಳಲ್ಲಿ ಮೋತಿಚೂರ್ ಲಾಡುಗಳಿಗೆ ವಿಶೇಷ ಸ್ಥಾನವಿದೆ. ಪ್ರಕಾಶಮಾನವಾದ ಕಿತ್ತಳೆ ಬಣ್ಣ ಮತ್ತು ಆಕರ್ಷಕ ವಿನ್ಯಾಸದ ಈ ಸಿಹಿ ಪ್ರತಿಯೊಬ್ಬರ ನೆಚ್ಚಿನ ಖಾದ್ಯ. ಆದರೆ, ಕಣ್ಣುಕೋರೈಸುವ ಬಣ್ಣ ಮತ್ತು ಅಲಂಕಾರವೇ ಉತ್ತಮ ಗುಣಮಟ್ಟಕ್ಕೆ ಸಾಕ್ಷಿಯಲ್ಲ. ಹಬ್ಬದ ಸಮಯದಲ್ಲಿ ಹೆಚ್ಚಾಗುವ ಬೇಡಿಕೆಯನ್ನು ಬಳಸಿಕೊಂಡು ಕೆಲವೆಡೆ ಕೃತಕ ಬಣ್ಣ, ಸುಗಂಧ ಮತ್ತು ಕಳಪೆ ಗುಣಮಟ್ಟದ ಕೊಬ್ಬನ್ನು ಬಳಸಿ ಲಾಡು ತಯಾರಿಸುವ ಸಾಧ್ಯತೆಯಿರುತ್ತದೆ. ಹಾಗಾದರೆ, ಶುದ್ಧ ಮತ್ತು ತಾಜಾ ಮೋತಿಚೂರ್ ಲಾಡುವನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಕೆಲವು ಸರಳ ಮಾರ್ಗಗಳು:
1. ಬೂಂದಿಯ ಗಾತ್ರ ಗಮನಿಸಿ: ಮೋತಿಚೂರ್ ಎಂದರೆ ‘ಪುಡಿಮಾಡಿದ ಮುತ್ತುಗಳು’ ಎಂದರ್ಥ. ಸಾಂಪ್ರದಾಯಿಕವಾಗಿ ಇದನ್ನು ಅತ್ಯಂತ ಸಣ್ಣ ಗಾತ್ರದ ಬೂಂದಿಯಿಂದ ತಯಾರಿಸಲಾಗುತ್ತದೆ. ಉತ್ತಮ ಮೋತಿಚೂರ್ ಲಾಡುವಿನಲ್ಲಿ ಸಣ್ಣ ಮತ್ತು ಸಮಾನ ಗಾತ್ರದ ಬೂಂದಿ ಕಾಳುಗಳಿರುತ್ತವೆ. ಬೂಂದಿಯ ಗಾತ್ರ ದೊಡ್ಡದಿದ್ದರೆ ಅದು ಸಾಮಾನ್ಯ ಬೂಂದಿ ಲಾಡುವೇ ವಿನಃ ನಿಜವಾದ ಮೋತಿಚೂರ್ ಅಲ್ಲ. ಅಲ್ಲದೆ, ತಾಜಾ ಲಾಡು ಬಾಯಲ್ಲಿಟ್ಟರೆ ಕರಗುವಷ್ಟು ಮೃದುವಾಗಿರಬೇಕು.
2. ಕೃತಕ ಬಣ್ಣದ ಬಗ್ಗೆ ಎಚ್ಚರ: ಉತ್ತಮ ಗುಣಮಟ್ಟದ ಮೋತಿಚೂರ್ ಲಾಡುಗಳು ತಿಳಿ ಹಳದಿ ಅಥವಾ ಸಾಧಾರಣ ಕಿತ್ತಳೆ ಬಣ್ಣದಲ್ಲಿರುತ್ತವೆ. ಲಾಡುವಿನ ಬಣ್ಣವು ಅತಿಯಾದ ಗಾಢ ಕೆಂಪು ಅಥವಾ ಕಣ್ಣು ಕೆಂಪಾಗಿಸುವಷ್ಟು ಪ್ರಕಾಶಮಾನವಾಗಿದ್ದರೆ, ಅದರಲ್ಲಿ ಅಪಾಯಕಾರಿ ರಾಸಾಯನಿಕ/ಕೃತಕ ಬಣ್ಣಗಳನ್ನು ಬಳಸಲಾಗಿದೆ ಎಂದರ್ಥ.
3. ಸುಗಂಧ ಮತ್ತು ತೇವಾಂಶ ಚೆಕ್ ಮಾಡಿ: ತಾಜಾ ಲಾಡುವಿನಿಂದ ಶುದ್ಧ ತುಪ್ಪ, ಏಲಕ್ಕಿ ಅಥವಾ ಕೇಸರಿಯ ನೈಸರ್ಗಿಕ ಸುವಾಸನೆ ಬರಬೇಕು. ಅತಿಯಾದ ಪರ್ಫ್ಯೂಮ್ ಮಾದರಿಯ ವಾಸನೆ ಬಂದರೆ ಕೃತಕ ಫ್ಲೇವರ್ ಬಳಸಲಾಗಿದೆ ಎಂದರ್ಥ. ಲಾಡುವನ್ನು ಕೈಯಲ್ಲಿ ಹಿಡಿದಾಗ ಅದು ಹದವಾದ ತೇವಾಂಶ ಹೊಂದಿರಬೇಕು. ಅತಿಯಾದ ಎಣ್ಣೆ ಅಥವಾ ಜಿಡ್ಡು ಸ್ರವಿಸುತ್ತಿದ್ದರೆ ಅದನ್ನು ಸರಿಯಾಗಿ ಸಂಗ್ರಹಿಸಿಲ್ಲ ಅಥವಾ ಕಳಪೆ ಎಣ್ಣೆ ಬಳಸಲಾಗಿದೆ ಎಂದು ಅರ್ಥೈಸಬಹುದು.
4. ಸಿಹಿಯ ಪ್ರಮಾಣ ಮತ್ತು ತಾಜಾತನ: ಒಳ್ಳೆಯ ಲಾಡುವಿನಲ್ಲಿ ಸಿಹಿಯ ಜೊತೆಗೆ ತುಪ್ಪ ಮತ್ತು ಏಲಕ್ಕಿಯ ಸವಿಯೂ ಹದವಾಗಿ ಬೆರೆತಿರುತ್ತದೆ. ಬರಿ ಸಕ್ಕರೆ ಪಾಕದ ಸವಿಯಷ್ಟೇ ಸಿಗುತ್ತಿದ್ದರೆ ಅದು ಕಳಪೆ ತಯಾರಿಕೆ. ಲಾಡು ಒಣಗಿದ್ದರೆ, ಗಟ್ಟಿಯಾಗಿದ್ದರೆ ಅಥವಾ ಹಳೆಯ ವಾಸನೆ ಬರುತ್ತಿದ್ದರೆ ಅದನ್ನು ಖರೀದಿಸಬೇಡಿ.
ವಿಶ್ವಾಸಾರ್ಹ ಅಂಗಡಿಗಳಲ್ಲಿ ಖರೀದಿಸಿ: ಹಬ್ಬದ ಸಮಯದಲ್ಲಿ ಯಾವಾಗಲೂ ನೈರ್ಮಲ್ಯ ಪಾಲಿಸುವ ಮತ್ತು ಉತ್ತಮ ಹೆಸರಿರುವ ಸಿಹಿ ತಿಂಡಿ ಅಂಗಡಿಗಳಿಂದಲೇ ಖರೀದಿ ಮಾಡಿ. ಪ್ಯಾಕ್ ಮಾಡಿದ ಲಾಡುಗಳ ಮೇಲೆ ತಯಾರಿಕಾ ದಿನಾಂಕ, ಬಳಸುವ ಗಡುವು (Expiry Date) ಹಾಗೂ FSSAI ಲೈಸೆನ್ಸ್ ಸಂಖ್ಯೆ ಇದೆಯೇ ಎಂದು ಪರಿಶೀಲಿಸುವುದು ಸುರಕ್ಷಿತ.

