ಹೈದರಾಬಾದ್: ತೆಲಂಗಾಣದಲ್ಲಿ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ನರರೋಗ ಶಸ್ತ್ರಚಿಕಿತ್ಸಕ ಸಜೀವ ದಹನವಾಗಿದ್ದಾರೆ.
ಭಾನುವಾರ ಬೆಳಿಗ್ಗೆ ಸೂರ್ಯಪೇಟೆ ಜಿಲ್ಲೆಯ ಪಿಳ್ಳಲಮರ್ರಿ ಬಳಿಯ ರಾಷ್ಟ್ರೀಯ ಹೆದ್ದಾರಿ NH-365BBಯಲ್ಲಿ, ಖಮ್ಮಂನ ನರರೋಗ ಶಸ್ತ್ರಚಿಕಿತ್ಸಕರೊಬ್ಬರು ಚಲಾಯಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ(ಡಿವೈಡರ್) ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಅವರು ಸಜೀವ ದಹನಗೊಂಡಿದ್ದಾರೆ.
ಡಾ. ಕೆ. ಜಗದೀಶ್ ಬಾಬು ಅವರು ಖಮ್ಮಂನಿಂದ ತಮ್ಮ ಕುಟುಂಬ ವಾಸವಿರುವ ಹೈದರಾಬಾದ್ ಗೆ ಪ್ರಯಾಣಿಸುತ್ತಿದ್ದಾಗ ಬೆಳಿಗ್ಗೆ 7.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಖಮ್ಮಂ ಗ್ರಾಮಾಂತರ ಸಿಐ ಜಿ. ರಾಜಶೇಖರ್ ಅವರ ಪ್ರಕಾರ, ನಿದ್ರೆಯ ಕೊರತೆಯಿಂದಾಗಿ ಅವರು ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
“ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋಯಿತು. ಜಗದೀಶ್ ಅವರು ಬೆಂಕಿಯಲ್ಲಿ ಸಿಲುಕಿ ಮೃತಪಟ್ಟರು” ಎಂದು ರಾಜಶೇಖರ್ ತಿಳಿಸಿದರು.
ಕೆಲವೇ ನಿಮಿಷಗಳಲ್ಲಿ ವಾಹನವು ಬೆಂಕಿಯ ಕೆನ್ನಾಲಗೆಗೆ ಸಿಲುಕಿತು, ಇದರಿಂದಾಗಿ ಸಂತ್ರಸ್ತರು ಒಳಗೆಯೇ ಸಿಲುಕಿಕೊಂಡರು. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು.
ಮೃತದೇಹವು ತೀವ್ರವಾಗಿ ಸುಟ್ಟುಹೋಗಿದ್ದರಿಂದ, ಆರಂಭದಲ್ಲಿ ಮೃತರ ಗುರುತನ್ನು ಪತ್ತೆಹಚ್ಚಲು ಪೊಲೀಸರಿಗೆ ಕಷ್ಟವಾಯಿತು.
ನಂತರ ಅವರನ್ನು ಖಮ್ಮಂನ ಖಾಸಗಿ ವೈದ್ಯಕೀಯ ಕಾಲೇಜಿನ ನರರೋಗ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಹಾಗೂ ಅಲ್ಲಿನ ಆಸ್ಪತ್ರೆಯ ನರರೋಗ ಶಸ್ತ್ರಚಿಕಿತ್ಸಕರಾದ ಡಾ. ಜಗದೀಶ್ ಬಾಬು ಎಂದು ಗುರುತಿಸಲಾಯಿತು.
ಅಪಘಾತ ಸಂಭವಿಸಿದಾಗ ಅವರು ಹೈದರಾಬಾದ್ ಕಡೆಗೆ ಪ್ರಯಾಣಿಸುತ್ತಿದ್ದರು. ಅಪಘಾತದ ವಿಷಯ ತಿಳಿದ ನಂತರ ಸೂರ್ಯಪೇಟೆಯ ವೈದ್ಯರು ಸ್ಥಳಕ್ಕೆ ಆಗಮಿಸಿದರು.
ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೂರ್ಯಪೇಟೆ ಸರ್ಕಾರಿ ಸಾಮಾನ್ಯ ಆಸ್ಪತ್ರೆಗೆ ರವಾನಿಸಲಾಯಿತು. ಅಪಘಾತಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ಕಲೆಹಾಕುತ್ತಿದ್ದಾರೆ.
ಮುಂಬೈ ಕರಾವಳಿ ರಸ್ತೆ ಸೇತುವೆಯಿಂದ ಕೆಳಗೆ ಬಿದ್ದ ಬಿಎಂಡಬ್ಲ್ಯೂ ಕಾರು: ಮೂವರು ಸಾವು, ಒಬ್ಬರ ಸ್ಥಿತಿ ಗಂಭೀರ
ಮುಂಬೈ: ಮುಂಬೈನ ಕರಾವಳಿ ರಸ್ತೆಯ ಸೇತುವೆಯಿಂದ ಐಷಾರಾಮಿ ಬಿಎಂಡಬ್ಲ್ಯೂ ಕಾರು ಕೆಳಗೆ ಬಿದ್ದ ಪರಿಣಾಮ, ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮೃತಪಟ್ಟಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
ಭಾನುವಾರ ಬೆಳಿಗ್ಗೆ 5:20 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕರಾವಳಿ ರಸ್ತೆ ನಿಯಂತ್ರಣ ಕೊಠಡಿಯ ಪ್ರಕಾರ, ಮರೀನ್ ಡ್ರೈವ್ನಿಂದ ಹಾಜಿ ಅಲಿಯ ಕಡೆಗೆ ಹೋಗುತ್ತಿದ್ದ ಕಪ್ಪು ಬಣ್ಣದ ಬಿಎಂಡಬ್ಲ್ಯೂ ಕಾರಿನ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದರಿಂದ ಅದು ಸೇತುವೆಯಿಂದ ಕೆಳಗೆ ಬಿದ್ದಿದೆ; ಇದಕ್ಕೆ ಅತಿಯಾದ ವೇಗವೇ ಕಾರಣ ಎಂದು ಹೇಳಲಾಗಿದೆ.
ಕಾರಿನಲ್ಲಿದ್ದ ನಾಲ್ವರನ್ನೂ ತಕ್ಷಣವೇ ಹತ್ತಿರದ ಮಹಾನಗರ ಪಾಲಿಕೆ ನಿರ್ವಹಣೆಯ ನಾಯರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮೃತಪಟ್ಟವರಲ್ಲಿ ಶನಯ್ ಗಜ್ಜಲ್ (21) ಮತ್ತು 17 ವರ್ಷದ ಬಾಲಕ ಸೇರಿದ್ದಾರೆ. ಸುಮಾರು 25 ವರ್ಷ ವಯಸ್ಸಿನ ಮತ್ತೊಬ್ಬ ವ್ಯಕ್ತಿಯನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಲ್ಕನೇ ಪ್ರಯಾಣಿಕರಾದ ಸುಮಾರು 20 ವರ್ಷ ವಯಸ್ಸಿನ ಗುರುತಿಸಲಾಗದ ವ್ಯಕ್ತಿಯು ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯ ಟ್ರಾಮಾ ವಾರ್ಡ್ನಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮುಂಬೈ ಕರಾವಳಿ ರಸ್ತೆಯು (Mumbai Coastal Road) 10.58 ಕಿ.ಮೀ ಉದ್ದದ ಹೈ-ಸ್ಪೀಡ್ ಹೆದ್ದಾರಿಯಾಗಿದ್ದು, ಇದು ದಕ್ಷಿಣ ಮುಂಬೈನ ಮರೀನ್ ಡ್ರೈವ್ ಅನ್ನು ಬಾಂದ್ರಾ-ವರ್ಲಿ ಸೀ ಲಿಂಕ್ ನ ವರ್ಲಿ ಭಾಗದೊಂದಿಗೆ ಸಂಪರ್ಕಿಸುತ್ತದೆ.

