ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಿರು ಬೇಸಿಗೆಯಲ್ಲಿ ಸುರಿಯುತ್ತಿರುವ ಗುಡುಗು, ಸಿಡಿಲು, ಆಲಿಕಲ್ಲು ಮಳೆ ರೈತರಿಗೆ ಸಂಕಷ್ಟ ತಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ದೊಡ್ಡ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದು, ಬೆಳೆ ನಷ್ಟವಾಗಿದೆ.
ಆಕಾಲಿಕ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ನೋಡಲು ಕಾಶ್ಮೀರದ ಹಿಮಪಾತದಂತೆ ಕಾಣುವ ಈ ದೃಶ್ಯಗಳು ನಮಗೆ ವಾಹ್ ಎನಿಸಬಹುದು, ಆದರೆ ಇದರ ಹಿಂದೆ ನಮ್ಮ ಅನ್ನದಾತನ ಬದುಕು ಬೀದಿಗೆ ಬಿದ್ದಿದೆ. ಕಳೆದ ಎರಡು ದಿನಗಳಿಂದ ರಾಜ್ಯದ ಹಲವೆಡೆ ಸುರಿದ ಭೀಕರ ಆಲಿಕಲ್ಲು ಮಳೆ ಕೇವಲ ಮಣ್ಣನ್ನು ತಣಿಸಿಲ್ಲ, ಬದಲಾಗಿ ರೈತನ ಕನಸುಗಳನ್ನು ಪುಡಿಪುಡಿ ಮಾಡಿದೆ’ ಎಂದು ಹೇಳಿದ್ದಾರೆ.
‘ಆ ಬಿಳಿ ಆಲಿಕಲ್ಲುಗಳ ಪದರದ ಅಡಿಯಲ್ಲಿ ರೈತನ ವರ್ಷದ ಬೆವರು ಮಣ್ಣು ಪಾಲಾಗಿದೆ ಎಂಬ ಕಹಿ ಸತ್ಯ ನಮಗೆ ಕಾಣುತ್ತಿಲ್ಲ. ಕಲಘಟಗಿ (ಮಾಚಾಪುರ) 2 ಗಂಟೆಗಳ ಕಾಲ ಬಿದ್ದ ಆಲಿಕಲ್ಲು ಮಳೆಗೆ 178ಕ್ಕೂ ಹೆಚ್ಚು ಮನೆಗಳ ಹಂಚುಗಳು ಪುಡಿಯಾಗಿವೆ. ಮಾವು, ಅಡಿಕೆ ಮತ್ತು ಕಬ್ಬು ಬೆಳೆಗಳು ಸೀಳಿ ಹೋಗಿ ರೈತರು ಕಂಗಾಲಾಗಿದ್ದಾರೆ’ ಎಂದು ತಿಳಿಸಿದ್ದಾರೆ.
‘ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹಠಾತ್ ಮಳೆಗೆ ಟೊಮೆಟೊ, ಸೋಯಾಬೀನ್ ಮತ್ತು ಕಟಾವಿಗೆ ಬಂದಿದ್ದ ತೋಟಗಾರಿಕೆ ಬೆಳೆಗಳು ಮಣ್ಣು ಪಾಲಾಗಿವೆ’ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
‘ದಕ್ಷಿಣ ಮತ್ತು ಮಲೆನಾಡು ಬೆಂಗಳೂರಿನ ಯಲಹಂಕ, ದೇವನಹಳ್ಳಿಯಿಂದ ಹಿಡಿದು ಹಾಸನ, ಶಿವಮೊಗ್ಗದವರೆಗೆ ಆಲಿಕಲ್ಲು ಮಳೆ ಮಾವಿನ ಹೂವು ಮತ್ತು ಕಾಯಿಗಳನ್ನು ಉದುರಿಸಿದೆ. ಯುಗಾದಿ ಹಬ್ಬದ ಹೊತ್ತಿಗೆ ಕೈಗೆ ಬರಬೇಕಿದ್ದ ಫಸಲು ಇಂದು ತಿಪ್ಪೆ ಸೇರುತ್ತಿದೆ’ ಎಂದು ಪೋಸ್ಟ್ ಹಾಕಿದ್ದಾರೆ.
ಸರ್ಕಾರಕ್ಕೆ ಆಗ್ರಹಗಳು
- ನಾವು ಎಸಿ ರೂಮಿನಲ್ಲಿ ಕುಳಿತು Snowfal” ವಿಡಿಯೋ ನೋಡಿ ಖುಷಿ ಪಡುತ್ತಿದ್ದೇವೆ. ಆದರೆ ಅತ್ತ ಹೊಲದಲ್ಲಿ ರೈತ ತನ್ನ ಜೀವನವನ್ನೇ ಕಳೆದುಕೊಂಡಿದ್ದಾನೆ. ಸರ್ಕಾರ ಕೂಡಲೇ ಈ ಕೆಳಗಿನ ಕ್ರಮ ಕೈಗೊಳ್ಳಬೇಕು.
- ತುರ್ತು ಸಮೀಕ್ಷೆ. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಹಾನಿ ಸಮೀಕ್ಷೆ ನಡೆಸಬೇಕು.
- ತಕ್ಷಣದ ಪರಿಹಾರ. ಮನೆ ಕಳೆದುಕೊಂಡ ಬಡವರಿಗೆ ಮತ್ತು ಬೆಳೆ ಕಳೆದುಕೊಂಡ ರೈತರಿಗೆ ಯಾವುದೇ ತಾಂತ್ರಿಕ ನೆಪ ಹೇಳದೆ ನೇರ ನಗದು ಪರಿಹಾರ ನೀಡಬೇಕು.
- ವಿಶೇಷ ಪ್ಯಾಕೇಜ್. ತೀವ್ರವಾಗಿ ಹಾನಿಗೊಳಗಾದ ಧಾರವಾಡ ಮತ್ತು ಹಾಸನದ ಮಾವು ಬೆಳೆಗಾರರಿಗೆ ವಿಶೇಷ ಆರ್ಥಿಕ ನೆರವು ಘೋಷಿಸಬೇಕು.
ಪರಿಸರ ಬದಲಾವಣೆಯ ಈ ಹೊಡೆತಕ್ಕೆ ಸಿಲುಕಿದ ಅನ್ನದಾತನಿಗೆ ದನಿಯಾಗೋಣ. ನಮ್ಮ ಸಂಭ್ರಮ ರೈತನ ಕಣ್ಣೀರಿನ ಮೇಲೆ ಬೇಡ ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

