ಇಂದು ( ಜೂನ್ 6 ) ಹೊಸದಿಲ್ಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತು.
ಸಿಜೆಪಿ ( ಕಾಕ್ರೋಚ್ ಜನತಾ ಪಾರ್ಟಿ ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅಮೆರಿಕಾದಿಂದ ಭಾರತಕ್ಕೆ ಈ ಪ್ರತಿಭಟನೆಗೋಸ್ಕರ ಆಗಮಿಸಿದರು. ಆರಂಭದಲ್ಲಿ ಈ ಪ್ರತಿಭಟನೆ ನಡೆಯುವುದು ಅನುಮಾನ, ಸಿಜೆಪಿ ಪೊಲೀಸರಿಂದ ಯಾವುದೇ ಅನುಮತಿ ಪಡೆದಿಲ್ಲ ಎನ್ನಲಾಗಿತ್ತು.
ಆದರೆ ಕೊನೆಯ ಹಂತದಲ್ಲಿ ಎಲ್ಲವೂ ನೆರವೇರಿತು. ಅನುಮತಿಯನ್ನು ಪಡೆದರು ಹಾಗೂ ಪ್ರತಿಭಟನೆ ಮಾಡಲು ಜನರೂ ಸಹ ಆಗಮಿಸಿದರು. ಆನ್ಲೈನ್ನಲ್ಲಿ ಶುರುವಾದ ಈ ಟ್ರೆಂಡ್ ನಂಬಿ ಜನ ಬರುತ್ತಾರಾ ಎಂದು ಪಕ್ಷ ಆರಂಭವಾದಾಗಿನಿಂದ ವಿರೋಧ ಸಾಧಿಸುತ್ತಾ ಬಂದ ವಿರೋಧಿಗಳು ಗೇಲಿ ಮಾಡಲಾರಂಭಿಸಿದರು.
ಹೀಗೆ ಗೇಲಿ ಮಾಡಿದವರೇ ಬೆಂಬಲಿಸಿದವರಿಗಿಂತ ಹೆಚ್ಚಾಗಿ ಪ್ರತಿಭಟನೆ ಕುರಿತ ಸುದ್ದಿಗಳು ಹಾಗೂ ವಿಡಿಯೊಗಳನ್ನು ನೋಡಲಾರಂಭಿಸಿದರು. ಜಂತರ್ ಮಂತರ್ ತುಂಬಿತು. ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಹಾಗೂ ಪೋಷಕರು ಜಮಾಯಿಸಿ ಕೇಂದ್ರ ಸರ್ಕಾರವನ್ನು ಶಿಕ್ಷಣ ಮಂತ್ರಿಗಳನ್ನು ತೆಗೆದು ಹಾಕುವಂತೆ ಘೋಷಣೆ ಕೂಗಿದರು.
ಹೀಗೆ ಪ್ರತಿಭಟನೆ ಯಶಸ್ವಿಯಾಯಿತು ಎನ್ನುವಷ್ಟರಲ್ಲಿ ಸಾಮಾಜಿಕ ಜಾಲತಾಣದಲ್ಲಿ #IndiaRejectsCJP ( ಭಾರತ ಸಿಜೆಪಿಯನ್ನು ತಿರಸ್ಕರಿಸಿತು ) ಎಂಬ ಟ್ರೆಂಡ್ ಶುರುವಾಯಿತು. ಸಾವಿರಾರು ಟ್ವೀಟ್ಗಳು ಈ ಹ್ಯಾಷ್ಟ್ಯಾಗ್ ಅಡಿಯಲ್ಲಿ ಹರಿದುಬಂದವು.
ಪ್ರತಿಭಟನೆ ಆರಂಭವಾಗುವವರೆಗೆ ಗೇಲಿ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ಸಿಜೆಪಿಯನ್ನು ಭಾರತ ತಿರಸ್ಕರಿಸಿದೆ ಎಂದು ದೊಡ್ಡ ಸಂಖ್ಯೆಯಲ್ಲಿ ಟ್ರೆಂಡ್ ಮಾಡುವ ಮೂಲಕ ತಾವು ಸಿಜೆಪಿಯನ್ನು ಗಂಭೀರವಾಗಿ ಪರಿಗಣಿಸಿರುವುದನ್ನು ಪರೋಕ್ಷವಾಗಿ ತಿಳಿಸಿದರು.
ಇನ್ನು ಕಾಕ್ರೋಚ್ ಜನತಾ ಪಾರ್ಟಿಯನ್ನು ಆರಂಭದಿಂದಲೂ ಬೆಂಬಲಿಸುತ್ತಾ ಹಾಗೂ ಅದರ ವಿರೋಧಿಗಳ ಎದುರು ಸಿಜೆಪಿಯನ್ನು ವಹಿಸಿಕೊಳ್ಳುತ್ತಾ ಬಂದ ಅಭಿಮಾನಿಗಳು ಈ ಟ್ರೆಂಡ್ ಬಗ್ಗೆ ಪೋಸ್ಟ್ಗಳನ್ನು ಹಂಚಿಕೊಂಡಿದ್ದು, ಇದು ಬಿಜೆಪಿ ಐಟಿ ಸೆಲ್ನ ಕೆಲಸ ಎಂದು ಟ್ವೀಟ್ ಮಾಡಿದ್ದಾರೆ.
ಬೆಳಗ್ಗೆವರೆಗೂ ಸುಮ್ಮನೆ ತಮಾಷೆ ಮಾಡುತ್ತಿದ್ದ ಅವರು ಇದ್ದಕ್ಕಿದ್ದಂತೆ ಗಂಭೀರವಾಗಿ ಸಿಜೆಪಿ ವಿರುದ್ಧ ಟ್ವೀಟ್ ಮಾಡಲಾರಂಭಿಸಿದರು. ಅದೂ ಸಹ ಸಾವಿರಾರು ಟ್ವೀಟ್ ಒಮ್ಮೆಲೇ ಹರಿದುಬಂದಿದೆ ಇದೆಲ್ಲ ಹಣ ಕೊಟ್ಟು ಮಾಡಿಸಿದ ಟ್ವೀಟ್ ಎಂದು ಆರೋಪ ಮಾಡುತ್ತಿದ್ದಾರೆ. ಇದರಿಂದಲೇ ಕಾಕ್ರೋಚ್ ಹಾವಳಿಗೆ ವಿರೋಧಿಗಳು ನಡುಗಿಹೋಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

