ಬೆಂಗಳೂರು: ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರ ಒಂದು ಕಡೆ ಉಚಿತ ಯೋಜನೆಗಳನ್ನು ಘೋಷಿಸುತ್ತಿದ್ದರೆ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ. ಇದರಿಂದ ಸಾಮಾನ್ಯ ಜನರು ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಹೈಕೋರ್ಟ್ ಕಿಡಿಕಾರಿದೆ.
ಮೈಸೂರು ಉಗ್ರಾಣದ ಹಿರಿಯ ವ್ಯವಸ್ಥಾಪಕರು ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕುರಿತು ನ್ಯಾಯಮೂರ್ತಿ ಶ್ರೀಶಾನಂದ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿದೆ. ಯೋಜನೆ ಉಚಿತ, ಆದರೆ ಬೆಲೆ ಏರಿಕೆ ಖಚಿತ ಎಂದು ವ್ಯಂಗ್ಯವಾಡಿದ ನ್ಯಾಯಪೀಠ, ಸರ್ಕಾರದ ಎಲ್ಲ ಯೋಜನೆಗಳೂ ಹೀಗೆಯೇ ಎಂದು ಪ್ರಶ್ನಿಸಿದೆ.
ಕಳೆದ ತಿಂಗಳು ಒಂದು ಕೆ.ಜಿ. ತುಪ್ಪ ಖರೀದಿಸಲು ಹೋದಾಗ 650 ರೂ. ಇತ್ತು. ಆದರೆ ಈಗ ಅದರ ಬೆಲೆ 850 ರೂ.ಗೆ ಏರಿಕೆಯಾಗಿದೆ. ದೀಪಾವಳಿಗೆ ತುಪ್ಪದ ಯಮದೀಪ ಹಚ್ಚಬೇಕು. ಇಷ್ಟೊಂದು ಬೆಲೆ ಹೆಚ್ಚಾದರೆ ಜನರು ಯಮದೀಪ ಹಚ್ಚುವುದಾದರೂ ಹೇಗೆ? ಯಮದೀಪ ಹಚ್ಚುವ ಬದಲು ನನ್ನನ್ನೇ ಕರೆದುಕೊಂಡು ಹೋಗು ಎಂದು ಯಮನಿಗೆ ಹೇಳಬೇಕಷ್ಟೇ. ಅಗತ್ಯ ವಸ್ತುಗಳ ಬೆಲೆ ಹೀಗೆಯೇ ಹೆಚ್ಚುತ್ತಾ ಹೋದರೆ ಮನುಷ್ಯ ಎಲ್ಲಿಗೆ ಹೋಗಬೇಕು? ಸಾಮಾನ್ಯ ಜನರು ಜೀವನ ನಡೆಸುವುದಾದರೂ ಹೇಗೆ ಎಂದು ನ್ಯಾಯಪೀಠ ಪ್ರಶ್ನಿಸಿದೆ.
ಪ್ರತಿ ಕೆ.ಜಿ. ಅಕ್ಕಿಗೆ 103 ರೂ. ಬೆಲೆಯಾಗಿದೆ ಎಂಬ ವಿಚಾರವೂ ನ್ಯಾಯಪೀಠದ ಗಮನಕ್ಕೆ ಬಂದಿದೆ. ಹಾಲಿನ ಬೆಲೆ ಹಾಗೂ ಬಸ್ ಟಿಕೆಟ್ ದರ (Bus Ticket Price Hike) ಕೂಡ ಹೆಚ್ಚಳವಾಗಿದೆ. ಒಂದು ಕಡೆ ಸರ್ಕಾರ ಉಚಿತ ಯೋಜನೆಗಳನ್ನು ನೀಡುತ್ತಿದ್ದರೆ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ದಿನಸಿ ಖರೀದಿಗೆ ಹೋದರೂ ಬಸ್ ಟಿಕೆಟ್ ದರ ಹೆಚ್ಚಳದ ಹೊರೆ ಜನರ ಮೇಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರ ಟನ್ ಕಬ್ಬಿಗೆ 3,600 ರೂ. ಬೆಂಬಲ ಬೆಲೆ ಘೋಷಿಸಿದೆ. ಆದರೆ ದೀಪಾವಳಿ ಮುಗಿದ ಬಳಿಕ ಒಂದು ಕೆ.ಜಿ. ಸಕ್ಕರೆ ಬೆಲೆ 90 ರೂ.ಗೆ ಏರಿಕೆಯಾಗಲಿದೆ ಎಂಬ ಆತಂಕವನ್ನೂ ಹೈಕೋರ್ಟ್ ಹೊರಹಾಕಿದೆ.
ಹಳೆಯ ದಾಸ್ತಾನಿನ ವಸ್ತುಗಳಿಗೂ ಹೊಸ ಬೆಲೆ ವಿಧಿಸಲಾಗುತ್ತಿದೆ ಎಂಬ ವಿಚಾರವನ್ನು ನ್ಯಾಯಪೀಠ ಪ್ರಸ್ತಾಪಿಸಿದೆ. ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ದಾಸ್ತಾನು ಮಾಡಲಾಗಿದ್ದ ಅಕ್ಕಿ ಮತ್ತು ಗೋಧಿಯಲ್ಲಿ 320 ಕ್ವಿಂಟಲ್ ಅಕ್ಕಿ ಹಾಗೂ 85 ಕ್ವಿಂಟಲ್ ಗೋಧಿ ಕೊರತೆ ಕಂಡುಬಂದಿರುವ ಬಗ್ಗೆಯೂ ವಿಚಾರಣೆ ವೇಳೆ ಉಲ್ಲೇಖವಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಲಾಗಿದೆ.

