ಮನೆಯ ಸುತ್ತಮುತ್ತ ಅಥವಾ ಖಾಲಿ ಜಾಗಗಳಲ್ಲಿ ಎಕ್ಕದ ಗಿಡ ತಾನಾಗಿಯೇ ಬೆಳೆಯುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಸನಾತನ ಧರ್ಮ, ವಾಸ್ತು ಶಾಸ್ತ್ರ ಹಾಗೂ ಆಯುರ್ವೇದದಲ್ಲಿ ಎಕ್ಕದ ಗಿಡಕ್ಕೆ ವಿಶೇಷ ಸ್ಥಾನವಿದೆ. ಆದರೆ ಮನೆಯ ತೀರಾ ಹತ್ತಿರದಲ್ಲಿ ಈ ಗಿಡ ಬೆಳೆದಾಗ ಅದನ್ನು ಇಟ್ಟುಕೊಳ್ಳಬೇಕೇ ಅಥವಾ ತೆಗೆದುಹಾಕಬೇಕೇ ಎಂಬ ಗೊಂದಲ ಹಲವರಲ್ಲಿ ಮೂಡುವುದು ಸಹಜ. ವಾಸ್ತು ಹಾಗೂ ಆರೋಗ್ಯದ ದೃಷ್ಟಿಯಿಂದ ಇದರ ಮಹತ್ವ ಮತ್ತು ವಹಿಸಬೇಕಾದ ಎಚ್ಚರಿಕೆಗಳ ವಿವರ ಇಲ್ಲಿದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪಕ್ಕದಲ್ಲಿ ಅಥವಾ ಆವರಣದಲ್ಲಿ ಎಕ್ಕದ ಗಿಡ, ಅದರಲ್ಲೂ ವಿಶೇಷವಾಗಿ ಬಿಳಿ ಬಣ್ಣದ ಹೂವು ಬಿಡುವ ಬಿಳಿ ಎಕ್ಕದ ಗಿಡ ಬೆಳೆಯುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಈ ಗಿಡದಲ್ಲಿ ಈಶ್ವರ ಹಾಗೂ ಗಣಪತಿಯ ವಾಸವಿರುತ್ತದೆ ಎಂಬ ನಂಬಿಕೆಯಿದೆ. ಮನೆಯ ಸುತ್ತಮುತ್ತ ಈ ಗಿಡ ಇದ್ದರೆ ದುಷ್ಟ ಶಕ್ತಿಗಳು, ಕಣ್ಣೇ ದೃಷ್ಟಿ ಹಾಗೂ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುವುದಿಲ್ಲ. ವಿಶೇಷವಾಗಿ ಮನೆಯ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಈ ಗಿಡ ಬೆಳೆದರೆ ಧನ ಧಾನ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.
ಇನ್ನು ಆಯುರ್ವೇದದಲ್ಲಿ ಎಕ್ಕದ ಗಿಡಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಇದರ ಎಲೆ, ಬೇರು ಹಾಗೂ ಹೂವುಗಳನ್ನು ವಿವಿಧ ಚರ್ಮ ರೋಗಗಳು, ಕೀಲು ನೋವು ಹಾಗೂ ಉರಿಯೂತ ಶಮನಕ್ಕೆ ಔಷಧಿಯಾಗಿ ಬಳಸಲಾಗುತ್ತದೆ. ಜೊತೆಗೆ ಶಿವ ಮತ್ತು ಗಣೇಶನ ಪೂಜೆಗೆ ಈ ಗಿಡದ ಹೂವುಗಳನ್ನು ವಿಶೇಷವಾಗಿ ಬಳಸಲಾಗುತ್ತದೆ.
ಆದಾಗ್ಯೂ ಮನೆಯ ಪಕ್ಕದಲ್ಲಿ ಎಕ್ಕದ ಗಿಡ ಇರುವಾಗ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ. ಎಕ್ಕದ ಗಿಡದ ಎಲೆ ಅಥವಾ ಕಡ್ಡಿಯನ್ನು ಮುರಿದಾಗ ಬರುವ ಬಿಳಿ ಹಾಲು ತೀವ್ರ ವಿಷಕಾರಿ ಗುಣವನ್ನು ಹೊಂದಿರುತ್ತದೆ. ಈ ಹಾಲು ಆಕಸ್ಮಾತ್ ಆಗಿ ಕಣ್ಣಿಗೆ ಬಿದ್ದರೆ ಕಣ್ಣಿನ ದೃಷ್ಟಿಗೆ ತೊಂದರೆಯಾಗುವ ಅಪಾಯವಿರುತ್ತದೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಅಥವಾ ಸಾಕುಪ್ರಾಣಿಗಳಿದ್ದರೆ ಅವು ಈ ಗಿಡವನ್ನು ಮುಟ್ಟದಂತೆ ಎಚ್ಚರ ವಹಿಸಬೇಕು.
ಅಲ್ಲದೆ ವಾಸ್ತು ಪ್ರಕಾರ ಈ ಗಿಡವು ಮನೆಯ ಮುಖ್ಯ ದ್ವಾರಕ್ಕೆ ತೀರಾ ಎದುರಾಗಿ ಅಥವಾ ಬಾಗಿಲಿಗೆ ತಾಕುವಂತೆ ಇರಬಾರದು. ಗಿಡವು ಮನೆಯ ಪ್ರವೇಶದ್ವಾರಕ್ಕೆ ಅಡ್ಡಲಾಗಿರದೆ ಸ್ವಲ್ಪ ಸುರಕ್ಷಿತ ಅಂತರದಲ್ಲಿದ್ದರೆ ಅದನ್ನು ಬೆಳೆಯಲು ಬಿಡಬಹುದು. ಒಂದು ವೇಳೆ ಮಕ್ಕಳ ಸುರಕ್ಷತೆಗೆ ಧಕ್ಕೆಯಾಗುವಂತೆ ತೀರಾ ಹತ್ತಿರದಲ್ಲಿದ್ದರೆ ಅದನ್ನು ಬೇರೊಂದು ಸೂಕ್ತ ಜಾಗಕ್ಕೆ ಸ್ಥಳಾಂತರಿಸುವುದು ಒಳಿತು.

