ಬಾಲಿವುಡ್ ಸೂಪರ್ ಹಿಟ್ ‘ಸ್ತ್ರೀ 2’ ಸಿನಿಮಾದ ಭಾರಿ ಯಶಸ್ಸಿನ ನಂತರ ನಟಿ ಶ್ರದ್ಧಾ ಕಪೂರ್ ತಮ್ಮ ಮುಂಬರುವ ‘ಈಥಾ’ ಸಿನಿಮಾದ ಮೂಲಕ ಮತ್ತೆ ಬೆಳ್ಳಿಪರದೆಗೆ ಮರಳಲು ಸಜ್ಜಾಗಿದ್ದಾರೆ. ಪ್ರಸಿದ್ಧ ಮಹಾರಾಷ್ಟ್ರದ ಲಾವಣಿ ಹಾಗೂ ತಮಾಷಾ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ‘ಈಥಾ’ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಅಕ್ಟೋಬರ್ 30 ರಂದು ಶುಕ್ರವಾರದಂದು ಅದ್ಧೂರಿಯಾಗಿ ಅನಾವರಣಗೊಂಡಿದೆ.
ಮುಂಬೈನ ದಾದರ್‌ನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟಿ ಶ್ರದ್ಧಾ ಕಪೂರ್ ಸಾಂಪ್ರದಾಯಿಕ ‘ನೌವಾರಿ’ ಸೀರೆ ಉಟ್ಟು ಭಾಗವಹಿಸುವ ಮೂಲಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಶ್ರದ್ಧಾ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಹಿನ್ನೆಲೆಯಲ್ಲಿ ಮೊಳಗಿದ ಧೋಲ್ ಶಬ್ದಕ್ಕೆ ಜಾನಪದ ನರ್ತಕಿಯರೊಂದಿಗೆ ಹೆಜ್ಜೆ ಹಾಕಿದರು. ಈ ಪೈಕಿ ಶ್ರದ್ಧಾ ಕಪೂರ್ ಅವರು ಮಹಾರಾಷ್ಟ್ರದ ಸಾಂಪ್ರದಾಯಿಕ ‘ಫುಗ್ಡಿ’ ನೃತ್ಯ ಮಾಡುತ್ತಾ ಸಂಭ್ರಮಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ದಿನೇಶ್ ವಿಜನ್ ಮತ್ತು ಲಕ್ಷ್ಮಣ್ ಉಟೇಕರ್ ನಿರ್ಮಾಣದ ಈ ಚಿತ್ರಕ್ಕೆ ಅಜಯ್-ಅತುಲ್ ಸಂಗೀತ ನೀಡಿದ್ದಾರೆ. ಶ್ರದ್ಧಾ ಕಪೂರ್ ಜೊತೆಗೆ ರಣದೀಪ್ ಹೂಡಾ ಮತ್ತು ಮೊಹಮ್ಮದ್ ಜೀಶನ್ ಅಯ್ಯೂಬ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಈಥಾ’ ಸಿನಿಮಾವು ಡಿಸೆಂಬರ್ 4, 2026 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

