HomeHealthಸದ್ದಿಲ್ಲದೆ ಅಟ್ಯಾಕ್ ಮಾಡುತ್ತಾ ಕಿಡ್ನಿ ಕಾಯಿಲೆ ? ಹೃದ್ರೋಗ ತಜ್ಞರಿಂದ ಹೊಸ ಮಾರ್ಗಸೂಚಿ !

ಸದ್ದಿಲ್ಲದೆ ಅಟ್ಯಾಕ್ ಮಾಡುತ್ತಾ ಕಿಡ್ನಿ ಕಾಯಿಲೆ ? ಹೃದ್ರೋಗ ತಜ್ಞರಿಂದ ಹೊಸ ಮಾರ್ಗಸೂಚಿ !

ಹೃದ್ರೋಗ (Cardiovascular Disease) ಇರುವವರು ಸಾಮಾನ್ಯವಾಗಿ ತಮ್ಮ ರಕ್ತದೊತ್ತಡ (ಬಿಪಿ), ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (ಶುಗರ್) ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ, ಇನ್ನು ಮುಂದೆ ಹೃದ್ರೋಗಿಗಳು ಈ ಪಟ್ಟಿಗೆ ಮತ್ತೊಂದು ಪ್ರಮುಖ ಅಂಗವನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಬೇಕಿದೆ……ಅದೇ ಕಿಡ್ನಿ (ಮೂತ್ರಪಿಂಡ).

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ (ESC) ಯುರೋಪಿಯನ್ ರೀನಲ್ ಅಸೋಸಿಯೇಷನ್ ಸಹಯೋಗದೊಂದಿಗೆ ನೂತನ ಜಾಗತಿಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, ಹೃದ್ರೋಗ ಇರುವುದು ದೃಢಪಟ್ಟ ತಕ್ಷಣವೇ ಪ್ರತಿಯೊಬ್ಬ ರೋಗಿಗೂ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ತಪಾಸಣೆ ನಡೆಸುವುದು ಕಡ್ಡಾಯ ಎಂದು ಶಿಫಾರಸು ಮಾಡಲಾಗಿದೆ.

ಹೃದಯ ಮತ್ತು ಕಿಡ್ನಿ ನಡುವಿನ ರಹಸ್ಯ ಲಿಂಕ್ ಏನು ?

ಹೃದಯ ಮತ್ತು ಮೂತ್ರಪಿಂಡಗಳು ದೇಹದಲ್ಲಿ ಪ್ರತ್ಯೇಕವಾಗಿ ಕೆಲಸ ಮಾಡುವುದಿಲ್ಲ; ಇವೆರಡೂ ಒಂದಕ್ಕೊಂದು ತಳುಕುಹಾಕಿಕೊಂಡಿರುವ ಅವಳಿ ವ್ಯವಸ್ಥೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಹೃದಯವು ರಕ್ತವನ್ನು ದೇಹದಾದ್ಯಂತ ಮತ್ತು ಕಿಡ್ನಿಗೆ ಪಂಪ್ ಮಾಡುತ್ತದೆ. ಕಿಡ್ನಿಯು ಆ ರಕ್ತವನ್ನು ಶುದ್ಧೀಕರಿಸಿ, ದ್ರವ ಸಮತೋಲನವನ್ನು ಕಾಪಾಡಿ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕರಿಸುತ್ತದೆ.

  • ಹೃದಯ ದುರ್ಬಲಗೊಂಡರೆ ಕಿಡ್ನಿಗೆ ಕಡಿಮೆ ರಕ್ತ ಪೂರೈಕೆಯಾಗಿ ಮೂತ್ರಪಿಂಡ ವೈಫಲ್ಯಕ್ಕೆ ದಾರಿಯಾಗಬಹುದು.

  • ತದ್ವಿರುದ್ಧವಾಗಿ, ಕಿಡ್ನಿ ಹಾಳಾದರೆ ದೇಹದಲ್ಲಿ ನೀರು ಶೇಖರಣೆಯಾಗಿ, ವಿಷಕಾರಿ ಅಂಶಗಳು ಹೆಚ್ಚಿ, ರಕ್ತದೊತ್ತಡ ಏರಿಕೆಯಾಗಿ ಹೃದಯದ ಮೇಲೆ ತೀವ್ರ ಒತ್ತಡ ಬೀಳುತ್ತದೆ.

  • ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಎರಡೂ ಅಂಗಗಳಿಗೂ ನೇರ ಕಂಟಕವಾಗಿ ಪರಿಣಮಿಸುತ್ತವೆ.

ಹೃದ್ರೋಗಿಗಳಿಗೆ ಕಡ್ಡಾಯವಾದ 2 ಸರಳ ಪರೀಕ್ಷೆಗಳು:

ಕಿಡ್ನಿ ಸಮಸ್ಯೆ ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ (Silent Killer). ಆದ್ದರಿಂದ ಕೇವಲ ರಕ್ತ ಪರೀಕ್ಷೆ ಮಾತ್ರ ಸಾಕಾಗುವುದಿಲ್ಲ, ಮೂತ್ರ ಪರೀಕ್ಷೆಯೂ ಅಷ್ಟೇ ಮುಖ್ಯ:

  1. eGFR ರಕ್ತ ಪರೀಕ್ಷೆ (Blood Creatinine): ಇದು ರಕ್ತದಲ್ಲಿನ ಕ್ರಿಯೇಟಿನೈನ್ ಮಟ್ಟವನ್ನು ಆಧರಿಸಿ ಕಿಡ್ನಿಗಳು ಎಷ್ಟು ಚೆನ್ನಾಗಿ ರಕ್ತವನ್ನು ಫಿಲ್ಟರ್ ಮಾಡುತ್ತಿವೆ ಎಂಬುದನ್ನು ತಿಳಿಸುತ್ತದೆ.

  2. UACR ಮೂತ್ರ ಪರೀಕ್ಷೆ (Urine Albumin-to-Creatinine Ratio): ಮೂತ್ರದಲ್ಲಿ ಅಲ್ಬುಮಿನ್ ಎಂಬ ಪ್ರೋಟೀನ್ ಸೋರಿಕೆಯಾಗುತ್ತಿದೆಯೇ ಎಂದು ಪತ್ತೆ ಮಾಡುತ್ತದೆ. ಆರೋಗ್ಯಕರ ಕಿಡ್ನಿ ಪ್ರೋಟೀನ್ ಸೋರಿಕೆಯನ್ನು ತಡೆಯುತ್ತದೆ. ಮೂತ್ರದಲ್ಲಿ ಪ್ರೋಟೀನ್ ಕಂಡುಬಂದರೆ ಕಿಡ್ನಿ ರಕ್ತನಾಳಗಳು ಹಾನಿಗೊಳಗಾಗುತ್ತಿವೆ ಎಂದರ್ಥ.

ಈ ಎರಡೂ ಪರೀಕ್ಷೆಗಳು ತೀರಾ ಸರಳ ಮತ್ತು ಅಗ್ಗವಾಗಿದ್ದು, ಆರಂಭದಲ್ಲೇ ಕಿಡ್ನಿ ಹಾನಿಯನ್ನು ಪತ್ತೆಹಚ್ಚಲು ನೆರವಾಗುತ್ತವೆ.

ಮೂತ್ರದಲ್ಲಿ ಪ್ರೋಟೀನ್ ಕಂಡರೆ ಹೃದಯಕ್ಕೆ ಏಕೆ ಅಪಾಯ ?

ಮೂತ್ರದಲ್ಲಿ ಅಲ್ಬುಮಿನ್ ಪ್ರೋಟೀನ್ ಕಾಣಿಸಿಕೊಳ್ಳುವುದು ಕೇವಲ ಕಿಡ್ನಿ ಸಮಸ್ಯೆಯ ಸಂಕೇತವಲ್ಲ. ಇದು ದೇಹದಾದ್ಯಂತ ಇರುವ ರಕ್ತನಾಳಗಳು ಹಾನಿಗೊಳಗಾಗುತ್ತಿವೆ ಎಂಬುದರ ಸ್ಪಷ್ಟ ಎಚ್ಚರಿಕೆಯ ಗಂಟೆ. ಹೃದ್ರೋಗಿಗಳಲ್ಲಿ ಇದು ಕಂಡುಬಂದರೆ ಅವರಿಗೆ ಮುಂದಿನ ದಿನಗಳಲ್ಲಿ ಹೃದಯಾಘಾತ ಅಥವಾ ಗಂಭೀರ ಹೃದಯ ಸಂಬಂಧಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ದುಪ್ಪಟ್ಟಾಗಿರುತ್ತದೆ ಎಂದು ಹೃದ್ರೋಗ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಭಾರತಕ್ಕೆ ಈ ಮಾರ್ಗಸೂಚಿ ಏಕೆ ಅತ್ಯಂತ ಮಹತ್ವದ್ದು ?

ಭಾರತದಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇರುವವರ ಸಂಖ್ಯೆ ವಿಪರೀತವಾಗಿದೆ. ಹೆಚ್ಚಿನ ಹೃದ್ರೋಗ ಆಸ್ಪತ್ರೆಗಳಲ್ಲಿ ಇಸಿಜಿ, ಎಕೋ ಅಥವಾ ಲಿಪಿಡ್ ಪ್ರೊಫೈಲ್ ಪರೀಕ್ಷೆಗಳಿಗೆ ನೀಡುವ ಮಹತ್ವವನ್ನು ಆರಂಭಿಕ ಕಿಡ್ನಿ ತಪಾಸಣೆಗೆ ನೀಡುವುದಿಲ್ಲ. ಗ್ರಾಮೀಣ ಮತ್ತು ಸಣ್ಣ ನಗರಗಳಲ್ಲಿ ಕಿಡ್ನಿ ತಜ್ಞರ (ನೆಫ್ರಾಲಜಿಸ್ಟ್) ಕೊರತೆಯೂ ಇದೆ.

ಆರಂಭಿಕ ಹಂತದಲ್ಲೇ ಕಿಡ್ನಿ ಸಮಸ್ಯೆಯನ್ನು ಪತ್ತೆಹಚ್ಚಿದರೆ, ಸೂಕ್ತ ಔಷಧಿಗಳ (ಉದಾಹರಣೆಗೆ RAS inhibitors, SGLT2 inhibitors) ಮೂಲಕ ಕಿಡ್ನಿ ಮತ್ತಷ್ಟು ಹದಗೆಡದಂತೆ ತಡೆಯಬಹುದು. ಇದರಿಂದ ಭವಿಷ್ಯದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವ ದುಸ್ಥಿತಿ ತಪ್ಪುವುದರ ಜೊತೆಗೆ ಹೃದಯಾಘಾತದ ಅಪಾಯವನ್ನೂ ಗಣನೀಯವಾಗಿ ತಗ್ಗಿಸಬಹುದು.

ತಜ್ಞರ ಕಿವಿಮಾತು: ಪರೀಕ್ಷೆಯಲ್ಲಿ ಕಿಡ್ನಿ ಏರುಪೇರು ಕಂಡುಬಂದ ತಕ್ಷಣ ಭಯಪಡುವ ಅಗತ್ಯವಿಲ್ಲ. ಇದು ತಕ್ಷಣದ ಕಿಡ್ನಿ ವೈಫಲ್ಯ ಎಂದರ್ಥವಲ್ಲ. ವೈದ್ಯರ ಸಲಹೆಯಂತೆ ಬಿಪಿ, ಶುಗರ್ ನಿಯಂತ್ರಣದಲ್ಲಿಟ್ಟುಕೊಳ್ಳುವುದು, ವೈದ್ಯರ ಸಲಹೆಯಿಲ್ಲದೆ ನೋವು ನಿವಾರಕ ಮಾತ್ರೆಗಳನ್ನು (Painkillers) ನುಂಗದಿರುವುದು ಹಾಗೂ ಸರಿಯಾದ ಜೀವನಶೈಲಿ ಅಳವಡಿಸಿಕೊಳ್ಳುವುದರಿಂದ ಹೃದಯ ಮತ್ತು ಕಿಡ್ನಿ ಎರಡನ್ನೂ ಆರೋಗ್ಯವಾಗಿ ಕಾಪಾಡಿಕೊಳ್ಳಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular