ಬೆಂಗಳೂರು: ಆಸ್ತಿ ಹಕ್ಕು, ವಾರಸುದಾರಿಕೆ, ಪಿಂಚಣಿ ಸೇರಿದಂತೆ ಹಲವು ಸರ್ಕಾರಿ ಹಾಗೂ ಕಾನೂನು ಸಂಬಂಧಿತ ಕೆಲಸಗಳಿಗೆ ವಂಶವೃಕ್ಷ ದೃಢೀಕರಣ ಪತ್ರ ಅಗತ್ಯವಾಗುತ್ತದೆ. ಕುಟುಂಬದ ಸದಸ್ಯರ ನಡುವಿನ ಸಂಬಂಧ ಹಾಗೂ ವಂಶಾವಳಿಯನ್ನು ದೃಢೀಕರಿಸುವ ಪ್ರಮುಖ ದಾಖಲೆಯೇ ವಂಶವೃಕ್ಷ ಪ್ರಮಾಣಪತ್ರ.
ಕರ್ನಾಟಕ ಕಂದಾಯ ಇಲಾಖೆಯು ವಂಶವೃಕ್ಷ ಪ್ರಮಾಣಪತ್ರ ವಿತರಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಅರ್ಜಿ ಸಲ್ಲಿಕೆ, ದಾಖಲೆಗಳ ಪರಿಶೀಲನೆ ಹಾಗೂ ಪ್ರಮಾಣಪತ್ರ ವಿತರಿಸುವ ವಿಧಾನವನ್ನು ಸ್ಪಷ್ಟಪಡಿಸಿದೆ. ಒಂದು ಕುಟುಂಬದ ಮೂಲ ವ್ಯಕ್ತಿಯಿಂದ ಆರಂಭಿಸಿ ಅವರ ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರ ನಡುವಿನ ಸಂಬಂಧವನ್ನು ದಾಖಲಿಸುವ ಪ್ರಮಾಣಪತ್ರವೇ ವಂಶವೃಕ್ಷ ದೃಢೀಕರಣ ಪತ್ರ. ಕುಟುಂಬದ ವಂಶಾವಳಿಯನ್ನು ಅಧಿಕೃತವಾಗಿ ದೃಢೀಕರಿಸಲು ಇದನ್ನು ಬಳಸಲಾಗುತ್ತದೆ.
ಆಸ್ತಿ ಹಂಚಿಕೆ, ವಾರಸುದಾರಿಕೆ, ಸರ್ಕಾರಿ ದಾಖಲೆಗಳಲ್ಲಿನ ಬದಲಾವಣೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಈ ಪ್ರಮಾಣಪತ್ರವನ್ನು ಕೇಳಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು?
ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಪ್ರಮುಖವಾಗಿ ಈ ದಾಖಲೆಗಳನ್ನು ಸಲ್ಲಿಸಬೇಕು:
-
₹100 ಮುಖಬೆಲೆಯ ಸ್ಟಾಂಪ್ ಪೇಪರ್‌ನಲ್ಲಿ ನೋಟರಿಯಿಂದ ದೃಢೀಕರಿಸಿದ ಅಫಿಡವಿಟ್
-
ಅರ್ಜಿದಾರರ ಆಧಾರ್ ಇ-ಕೆವೈಸಿ
-
ಕುಟುಂಬದ ಜೀವಂತ ಸದಸ್ಯರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್ ಅಥವಾ ಶಾಲಾ ದಾಖಲೆಗಳಲ್ಲಿ ಯಾವುದಾದರೂ ಒಂದು
-
ಅರ್ಜಿದಾರರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
ಮೃತ ಕುಟುಂಬ ಸದಸ್ಯರ ದಾಖಲೆ ಹೇಗೆ?
ವಂಶವೃಕ್ಷದಲ್ಲಿ ಮೃತಪಟ್ಟ ಕುಟುಂಬ ಸದಸ್ಯರ ಹೆಸರನ್ನು ಸೇರಿಸಬೇಕಾದರೆ ಅವರ ಡಿಜಿಟಲ್ ಮರಣ ಪ್ರಮಾಣಪತ್ರದ ಸಂಖ್ಯೆ ನಮೂದಿಸಬೇಕು.
ಡಿಜಿಟಲ್ ಮರಣ ಪ್ರಮಾಣಪತ್ರ ಲಭ್ಯವಿಲ್ಲದಿದ್ದರೆ ದೃಢೀಕೃತ ಭೌತಿಕ ಮರಣ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಎರಡೂ ದಾಖಲೆಗಳು ಇಲ್ಲದಿದ್ದರೆ, ಮೃತ ವ್ಯಕ್ತಿಯ ಗುರುತಿನ ದಾಖಲೆಯೊಂದಿಗೆ ಗ್ರಾಮ ಆಡಳಿತ ಅಧಿಕಾರಿಯ ಪರಿಶೀಲನಾ ವರದಿಯನ್ನು ಸಲ್ಲಿಸಬೇಕಾಗುತ್ತದೆ.
ಎಲ್ಲಿ ಅರ್ಜಿ ಸಲ್ಲಿಸಬಹುದು?
ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ನಾಡಕಚೇರಿ, ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಅಧಿಕೃತ ಆನ್‌ಲೈನ್ ನಾಗರಿಕ ಸೇವಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಬಳಿಕ ಏನಾಗುತ್ತದೆ?
ಅರ್ಜಿ ಸ್ವೀಕರಿಸಿದ ಬಳಿಕ ಗ್ರಾಮ ಆಡಳಿತ ಅಧಿಕಾರಿ ಅರ್ಜಿದಾರರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರು ಹಾಗೂ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಬಳಿಕ ವರದಿಯನ್ನು ರಾಜಸ್ವ ನಿರೀಕ್ಷಕರಿಗೆ ಕಳುಹಿಸಲಾಗುತ್ತದೆ.
ರಾಜಸ್ವ ನಿರೀಕ್ಷಕರು ವರದಿಯನ್ನು ಪರಿಶೀಲಿಸಿ ಅಗತ್ಯವಿದ್ದರೆ ಸ್ಥಳ ತನಿಖೆ ನಡೆಸಿ ಉಪ ತಹಶೀಲ್ದಾರರಿಗೆ ಶಿಫಾರಸು ಮಾಡುತ್ತಾರೆ. ಅಂತಿಮವಾಗಿ ವಂಶವೃಕ್ಷ ಪ್ರಮಾಣಪತ್ರ ನೀಡುವ ಅಥವಾ ಅರ್ಜಿಯನ್ನು ತಿರಸ್ಕರಿಸುವ ಅಧಿಕಾರ ಉಪ ತಹಶೀಲ್ದಾರರಿಗೆ ಇರುತ್ತದೆ.
ಎಷ್ಟು ದಿನಗಳಲ್ಲಿ ಪ್ರಮಾಣಪತ್ರ ಸಿಗುತ್ತದೆ?
ಹೊಸ ಮಾರ್ಗಸೂಚಿಯ ಪ್ರಕಾರ ಅರ್ಜಿಯನ್ನು 14 ದಿನಗಳ ಒಳಗೆ ವಿಲೇವಾರಿ ಮಾಡಬೇಕಾಗಿದೆ. ಪ್ರಮಾಣಪತ್ರ ಮಂಜೂರಾದ ಅಥವಾ ಅರ್ಜಿ ತಿರಸ್ಕೃತಗೊಂಡ ಮಾಹಿತಿ ಅರ್ಜಿದಾರರಿಗೆ SMS ಅಥವಾ ಇ-ಮೇಲ್ ಮೂಲಕ ತಿಳಿಸಲಾಗುತ್ತದೆ.
ಸುಳ್ಳು ಮಾಹಿತಿ ನೀಡಿದರೆ ಕ್ರಮ
ವಂಶವೃಕ್ಷ ಪ್ರಮಾಣಪತ್ರ ಪಡೆಯುವ ವೇಳೆ ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದರೆ ಸಂಬಂಧಪಟ್ಟ ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಅರ್ಜಿಯಲ್ಲಿ ಕುಟುಂಬದ ಸದಸ್ಯರ ವಿವರಗಳನ್ನು ನಿಖರವಾಗಿ ನೀಡುವುದು ಅತ್ಯಂತ ಮುಖ್ಯ.
ಪ್ರಮಾಣಪತ್ರದ ಅವಧಿ ಎಷ್ಟು?
ವಂಶವೃಕ್ಷ ಪ್ರಮಾಣಪತ್ರವು ಕುಟುಂಬದಲ್ಲಿ ಹೊಸ ಜನನ ಅಥವಾ ಮರಣ ಸಂಭವಿಸುವವರೆಗೆ, ಅಥವಾ ಗರಿಷ್ಠ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
. ವಂಶವೃಕ್ಷದಲ್ಲಿ ಏನು ಇರುತ್ತದೆ?
-
ಅರ್ಜಿದಾರರ ಹೆಸರು
-
ತಂದೆ/ತಾಯಿ ಹೆಸರು
-
ಪತಿ/ಪತ್ನಿಯ ಹೆಸರು
-
ಮಗ/ಮಗಳ ಹೆಸರು
-
ಮೊಮ್ಮಕ್ಕಳ ವಿವರ
-
ಪ್ರತಿಯೊಬ್ಬರ ವಯಸ್ಸು
-
ಅರ್ಜಿದಾರರೊಂದಿಗೆ ಇರುವ ಸಂಬಂಧ
-
ಅಗತ್ಯವಿದ್ದಲ್ಲಿ ಆಧಾರ್ / ಪಾನ್ / ಎಪಿಕ್ ವಿವರ
-
ಮೃತ ವ್ಯಕ್ತಿಯ ಹೆಸರು ಮತ್ತು ಮರಣದ ವಿವರ
-
ಕುಟುಂಬದ ವಿಳಾಸ
2. ಯಾವಾಗ ವಂಶವೃಕ್ಷ ಬೇಕಾಗುತ್ತದೆ?
-
ಜಮೀನು ಅಥವಾ ಆಸ್ತಿಧರರು ಮೃತಪಟ್ಟಾಗ
-
ವಾರಸುದಾರರನ್ನು ಗುರುತಿಸಲು
-
ಪೌತಿ ಖಾತೆ / ಮ್ಯೂಟೇಶನ್ ಪ್ರಕ್ರಿಯೆಯಲ್ಲಿ
-
ಆಸ್ತಿ ಹಂಚಿಕೆ ಅಥವಾ ಉತ್ತರಾಧಿಕಾರ ವಿಚಾರಗಳಲ್ಲಿ
-
ಪಿಂಚಣಿ / ಕುಟುಂಬ ಪಿಂಚಣಿ
-
ವಿಮೆ / ಇತರ ಪ್ರಯೋಜನಗಳ ಪಡೆಯಲು
-
ಸರ್ಕಾರಿ ಸೇವಾ ಪ್ರಯೋಜನಗಳಿಗೆ
-
ಉತ್ತರಾಧಿಕಾರ ಸಂಬಂಧಿತ ವ್ಯಾಜ್ಯಗಳಲ್ಲಿ
-
ಸರ್ವೆ, ಸೆಟಲ್‌ಮೆಂಟ್ ಸಂಬಂಧಿತ ಕೆಲಸಗಳಿಗೆ
3. ಎಲ್ಲಿ ಮಾಡಿಸಬಹುದು?
ಈ ಪ್ರಕ್ರಿಯೆ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯುತ್ತದೆ.
ತಾಲೂಕಿನಲ್ಲಿ ತಹಶೀಲ್ದಾರ್ ಅಥವಾ ನಿಯೋಜಿತ ಅಧಿಕಾರಿಗಳ ಮೂಲಕ ವಂಶವೃಕ್ಷದ ದೃಢೀಕರಣ ಮಾಡಲಾಗುತ್ತದೆ.
4. ಸಾಮಾನ್ಯವಾಗಿ ಬೇಕಾಗುವ ದಾಖಲೆಗಳು
-
ಮೃತ ವ್ಯಕ್ತಿಯ ಮರಣ ಪ್ರಮಾಣಪತ್ರ
-
ಅರ್ಜಿದಾರರ ಗುರುತಿನ ದಾಖಲೆ
-
ಕುಟುಂಬದ ಸದಸ್ಯರ ಗುರುತಿನ ದಾಖಲೆಗಳು
-
ಸಂಬಂಧವನ್ನು ತೋರಿಸುವ ದಾಖಲೆಗಳು
-
ವಿಳಾಸದ ದಾಖಲೆ
-
ಹಳೆಯ ಆರ್.ಟಿ.ಸಿ / ಆಸ್ತಿ ದಾಖಲೆಗಳು (ಅಗತ್ಯವಿದ್ದರೆ)
-
ವಿವಾಹ ಪ್ರಮಾಣಪತ್ರ (ಅಗತ್ಯವಿದ್ದರೆ)
-
ಜನನ ಪ್ರಮಾಣಪತ್ರ (ಅಗತ್ಯವಿದ್ದರೆ)
-
ಇತರ ವಾರಸುದಾರರ ವಿವರಗಳು
5. ಪ್ರಮುಖವಾದ ವಿಷಯಗಳು
-
ವಂಶವೃಕ್ಷದಲ್ಲಿ ಯಾರಾದರೂ ಹೆಸರು ಇದ್ದ ಮಾತ್ರಕ್ಕೆ ಆಸ್ತಿಯಲ್ಲಿ ಪಾಲು ಸಿಗುತ್ತದೆ ಎಂದು ಅರ್ಥವಲ್ಲ.
-
ಆಸ್ತಿ ಹಕ್ಕು ನಿರ್ಧಾರಕ್ಕೆ ಕಾನೂನು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಬೇಕು.
-
ವಂಶವೃಕ್ಷ ಸ್ವತಃ ಆರ್.ಟಿ.ಸಿಯಲ್ಲಿ ಹೆಸರು ಬದಲಿಸುವುದಿಲ್ಲ. ಮ್ಯೂಟೇಶನ್ ಪ್ರಕ್ರಿಯೆಯ ಮೂಲಕವೇ ಹೆಸರು ಬದಲಾಗುತ್ತದೆ.
-
ಸ್ವಯಂ ತಯಾರಿಸಿದ ವಂಶವೃಕ್ಷಕ್ಕೆ ಕಾನೂನುಬದ್ಧ ಮಹತ್ವ ಇರುವುದಿಲ್ಲ. ಸರ್ಕಾರದ ದೃಢೀಕರಣ ಮುಖ್ಯ.

