ಉದ್ಯೋಗಿಗಳ ಭವಿಷ್ಯದ ಸಾಮಾಜಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ಕಡ್ಡಾಯ ವ್ಯಾಪ್ತಿಗೆ ಒಳಪಡುವ ಮಾಸಿಕ ವೇತನದ ಮಿತಿಯನ್ನು ₹15,000ರಿಂದ ₹25,000ಕ್ಕೆ ಹೆಚ್ಚಿಸಲಾಗಿದೆ. ಕಾರ್ಮಿಕ ಸಚಿವಾಲಯದ ಈ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 2014ರ ನಂತರ EPFO ವೇತನ ಮಿತಿಯಲ್ಲಿ ಇಷ್ಟೊಂದು ದೊಡ್ಡ ಬದಲಾವಣೆ ಇದೇ ಮೊದಲ ಬಾರಿಗೆ ನಡೆದಿದೆ. ಹೊಸ ನಿಯಮವು ಸೆಪ್ಟೆಂಬರ್ 17, 2026ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.
ಈ ನಿರ್ಧಾರದ ಬೆನ್ನಲ್ಲೇ, ಭಾರತದಲ್ಲಿ ತಿಂಗಳಿಗೆ ₹25,000 ಅಥವಾ ಅದಕ್ಕಿಂತ ಹೆಚ್ಚು ಗಳಿಸುವವರು ವಾಸ್ತವವಾಗಿ ಎಷ್ಟು ಮಂದಿ? ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.
ಈ ನಿರ್ಧಾರದಿಂದ ಯಾರಿಗೆ ಎಷ್ಟು ಪ್ರಯೋಜನ?
ಸರ್ಕಾರದ ವರದಿಗಳು ಹಾಗೂ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, EPFO ವೇತನ ಮಿತಿಯನ್ನು ₹25,000ಕ್ಕೆ ಹೆಚ್ಚಿಸುವುದರಿಂದ ದೇಶದಲ್ಲಿ ಹೆಚ್ಚುವರಿಯಾಗಿ 51 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ನೇರವಾಗಿ ಪ್ರಯೋಜನ ಪಡೆಯಲಿದ್ದಾರೆ.
ಅಂದರೆ, ಈ ಹಿಂದೆ ಮಾಸಿಕ ಮೂಲ ವೇತನ ₹15,000ಕ್ಕಿಂತ ಹೆಚ್ಚಿದ್ದ ಕಾರಣ PF ಮತ್ತು ಪಿಂಚಣಿ ಯೋಜನೆಗಳ ಕಡ್ಡಾಯ ವ್ಯಾಪ್ತಿಯಿಂದ ಹೊರಗಿದ್ದ ಸುಮಾರು 51 ಲಕ್ಷ ಅಧಿಕೃತ ವಲಯದ ಉದ್ಯೋಗಿಗಳು ಇದೀಗ ಹೊಸ ವೇತನ ಮಿತಿಯ ವ್ಯಾಪ್ತಿಗೆ ಬರಲಿದ್ದಾರೆ. ಇದರಿಂದ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳ ಭವಿಷ್ಯದ ಆರ್ಥಿಕ ಭದ್ರತೆ ಮತ್ತಷ್ಟು ಬಲಪಡಿಸಬಹುದು.
ಆದರೆ, ಸಂಘಟಿತ ಉದ್ಯೋಗ ವಲಯದಲ್ಲಿ ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನದ ನಡುವೆಯೇ ದೇಶದ ಆದಾಯ ಅಸಮಾನತೆಯ ಅಂಕಿಅಂಶಗಳೂ ಗಮನ ಸೆಳೆಯುತ್ತವೆ. ಕೆಲವು ಅಧ್ಯಯನಗಳ ಪ್ರಕಾರ, ಭಾರತದಲ್ಲಿ ತಿಂಗಳಿಗೆ ₹25,000ಕ್ಕಿಂತ ಹೆಚ್ಚು ಅಥವಾ ವರ್ಷಕ್ಕೆ ಸುಮಾರು ₹3 ಲಕ್ಷಕ್ಕಿಂತ ಹೆಚ್ಚು ಗಳಿಸುವವರು ಒಟ್ಟು ಜನಸಂಖ್ಯೆಯ ಮೇಲಿನ ಶೇ.10ರ ವ್ಯಾಪ್ತಿಯಲ್ಲಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಭಾರತದ ಶೇ.80ರಷ್ಟು ಕಾರ್ಮಿಕರ ನೈಜ ಮಾಸಿಕ ಆದಾಯ ಎಷ್ಟು?
ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS)ಯ 2024ರ ಅಂಕಿಅಂಶಗಳನ್ನು ಆಧರಿಸಿದ ವರದಿಗಳ ಪ್ರಕಾರ, ಭಾರತದಲ್ಲಿನ ಸುಮಾರು ಶೇ.80ರಷ್ಟು ಕಾರ್ಮಿಕರು ತಿಂಗಳಿಗೆ ₹20,000ಕ್ಕಿಂತ ಕಡಿಮೆ ಆದಾಯ ಗಳಿಸುತ್ತಿದ್ದಾರೆ.
2024ರ ಅಂಕಿಅಂಶಗಳ ಪ್ರಕಾರ ವಿವಿಧ ವರ್ಗಗಳ ಸರಾಸರಿ ಆದಾಯ ಹೀಗಿದೆ:
-
ಸಾಮಾನ್ಯ ಕಾರ್ಮಿಕರ ಸರಾಸರಿ ಆದಾಯ: ತಿಂಗಳಿಗೆ ಸುಮಾರು ₹21,000
-
ಸ್ವಯಂ ಉದ್ಯೋಗಿಗಳ ಸರಾಸರಿ ಆದಾಯ: ತಿಂಗಳಿಗೆ ಸುಮಾರು ₹13,200
-
ದಿನಗೂಲಿ ಕಾರ್ಮಿಕರ ಸರಾಸರಿ ಆದಾಯ: ತಿಂಗಳಿಗೆ ಸುಮಾರು ₹9,000
ವೇತನ ಮಿತಿ ಹೆಚ್ಚಳದಿಂದ ಪರಿಸ್ಥಿತಿ ಬದಲಾಗುತ್ತದೆಯೇ?
EPFO ವೇತನ ಮಿತಿಯನ್ನು ₹25,000ಕ್ಕೆ ಹೆಚ್ಚಿಸಿರುವುದರಿಂದ ಹೆಚ್ಚಿನ ಉದ್ಯೋಗಿಗಳು PF ಮತ್ತು ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ವ್ಯವಸ್ಥೆಯ ವ್ಯಾಪ್ತಿಗೆ ಬರಬಹುದು. ಲಕ್ಷಾಂತರ ಉದ್ಯೋಗಿಗಳು ನಿಯಮಿತವಾಗಿ ಭವಿಷ್ಯ ನಿಧಿಯಲ್ಲಿ ಉಳಿತಾಯ ಮಾಡುವ ಅವಕಾಶವೂ ಹೆಚ್ಚಾಗಲಿದೆ.
ಆದರೆ, ದೇಶದ ಬಹುಪಾಲು ಕಾರ್ಮಿಕರು ₹20,000ಕ್ಕಿಂತ ಕಡಿಮೆ ಮಾಸಿಕ ಆದಾಯ ಹೊಂದಿರುವ ಸಂದರ್ಭದಲ್ಲಿ EPFO ವೇತನ ಮಿತಿಯನ್ನು ₹25,000ಕ್ಕೆ ಹೆಚ್ಚಿಸಿರುವುದರಿಂದ ವಾಸ್ತವವಾಗಿ ಎಷ್ಟು ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
ಈ ಅಂಕಿಅಂಶಗಳು ದೇಶದಲ್ಲಿ ಇನ್ನೂ ದೊಡ್ಡ ಪ್ರಮಾಣದ ಜನರು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಅಗತ್ಯವಿರುವ ಆದಾಯಕ್ಕಿಂತ ಕಡಿಮೆ ಮಟ್ಟದಲ್ಲಿ ಬದುಕುತ್ತಿರುವುದನ್ನು ಸೂಚಿಸುತ್ತವೆ.

