ಬೆಂಗಳೂರು: ಕಾಲೇಜಿಗೆ ಹೋಗಲು ಬಟ್ಟೆ ಖರೀದಿಸಲು ಅಮ್ಮನ ಜೊತೆ ಬಂದಿದ್ದ ವಿದ್ಯಾರ್ಥಿಯೊಬ್ಬ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ.
ವಿದ್ಯಾರ್ಥಿ ದ್ವಿಚಕ್ರ ವಾಹನ ಪಾರ್ಕ್ ಮಾಡುವಾಗ ವಿದ್ಯುತ್ ವೈರ್ ತುಂದಾಗಿ ಬಿದ್ದಿದೆ. ಕರೆಂಟ್ ಶಾಕ್ ಹೊಡೆದು ವಿದ್ಯಾರ್ಥಿ ತಾಯಿ ಕಣ್ಣೆದುರೇ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಗನ ಸಾವು ಕಣ್ಣಾರೆ ಕಂಡ ತಾಯಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಯ್ಯದ್ ಸುಫಿಯಾನ್ (17) ಮೃತ ವಿದ್ಯಾರ್ಥಿ. ತಾಯಿ ಉಮೇ ಸಲ್ಮಾ ಆರೋಗ್ಯದಲ್ಲಿ ಏರುಪೇರಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಯ್ಯದ್ ಕಾಡುಗೊಂಡನಹಳ್ಳಿ ವೆಂಕಟಾಪುರದಲ್ಲಿ ವಾಸವಾಗಿದ್ದ. ಪ್ರಥಮ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ದ್ವಿತೀಯ ಪಿಯುಸಿ ವ್ಯಾಸಂಗಕ್ಕಾಗಿ ಸನ್ನದ್ಧನಾಗಿದ್ದ. ಕಾಲೇಜಿಗೆ ಹೋಗಲು ಬಟ್ಟೆ ಖರೀದಿಸಲು ಆಕ್ಟಿವಾ ಹೊಂಡಾ ವಾಹನದಲ್ಲಿ ಅಮ್ಮ ಹಾಗೂ ಸೋದರ ಸಂಬಂಧಿ ಜೊತೆ ಶಿವಾಜಿನಗರಕ್ಕೆ ಬಂದಿದ್ದ. ಬಟ್ಟೆ ಖರೀದಿಗಾಗಿ ದ್ವಿಚಕ್ರ ವಾಹನ ಪಾರ್ಕಿಂಗ್ಗೆ ಮುಂದಾಗಿದ್ದ. ಇದೇ ವೇಳೆ ಬಿರುಗಾಳಿ ಸಮೇತ ಧಾರಾಕಾರ ಮಳೆ ಶುರುವಾಗಿದ್ದು, ವಿದ್ಯುತ್ ತಂತಿ ತುಂಡಾಗಿ ಬಿದ್ದು ಸಾವನ್ನಪ್ಪಿದ್ದಾನೆ.
ಘಟನೆ ಕಣ್ಣಾರೆ ಕಂಡ ತಾಯಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಸಂಬಂಧಿಗಳು ತಿಳಿಸಿದ್ದಾರೆ.
ಸಯ್ಯದ್ ತಂದೆ ಶಫಿವುಲ್ಲಾ ಅವರು ಆಟೋ ಮೊಬೈಲ್ ಶಾಪ್ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸಯ್ಯದ್ ಗೆ ಆರು ವರ್ಷದ ತಂಗಿಯೂ ಇದ್ದಾಳೆ. ಪೋಷಕರಿಗೆ ಸಯ್ಯದ್ನನ್ನು ಚೆನ್ನಾಗಿ ಓದಿಸಿ ಇಂಜಿನಿಯರಿಂಗ್ ಮಾಡಬೇಕು ಎಂಬ ಆಸೆಯಿತ್ತು. ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 7 ಜನರು ಸಾವನ್ನಪ್ಪಿದ ದುರಂತಕ್ಕೂ ಕೆಲ ಕ್ಷಣಗಳ ಹಿಂದೆ ಈ ದುರಂತ ಸಂಭವಿಸಿದೆ.

