ಬೆಂಗಳೂರು: ಸಿಲಿಕಾನ್ ಸಿಟಿಯ ಆಹಾರ ಪ್ರಿಯರೇ ಎಚ್ಚರ ನೀವು ಹೊರಗಡೆ ತಿನ್ನುವ ತಿಂಡಿ ಎಷ್ಟು ಸುರಕ್ಷಿತ? ಮಾಗಡಿ ರಸ್ತೆಯ ಬೇಕರಿಯೊಂದರಲ್ಲಿ ಖರೀದಿಸಿದ ಪನೀರ್ ಟಿಕ್ಕಾ ರೋಲ್‌ನಲ್ಲಿ ಹಲ್ಲಿ ಪತ್ತೆಯಾಗಿರುವ ಅಸಹ್ಯಕರ ಘಟನೆ ಈಗ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಈ ಕಲುಷಿತ ಆಹಾರ ಸೇವಿಸಿದ 32 ವರ್ಷದ ಕ್ಯಾಬ್ ಚಾಲಕ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಪಾಲಾಗಿದ್ದಾರೆ.
ಘಟನೆಯ ವಿವರ:
ಅಗ್ರಹಾರ ದಾಸರಹಳ್ಳಿಯ ನಿವಾಸಿಯಾದ ದೀಪು ಎನ್.ಕೆ. ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿದ್ದು ಕಳೆದ ಏಪ್ರಿಲ್ 25ರಂದು ಸಂಜೆ 4 ಗಂಟೆಯ ಸುಮಾರಿಗೆ ಮಾಗಡಿ ರಸ್ತೆಯ ಹೌಸಿಂಗ್ ಬೋರ್ಡ್ ಬಳಿ ಇರುವ ಬೇಕರಿಗೆ ತೆರಳಿದ್ದರು. ಅಂದು ಮಧ್ಯಾಹ್ನ ಊಟ ಮಾಡದಿದ್ದ ಕಾರಣ ತೀವ್ರ ಹಸಿವಿನಲ್ಲಿದ್ದ ದೀಪು, ಮೊದಲು ಬೇಕರಿಯಲ್ಲಿ ಚಿಕನ್ ರೋಲ್ ಆರ್ಡರ್ ಮಾಡಿದ್ದರು. ಆದರೆ ಆ ಸಮಯದಲ್ಲಿ ಚಿಕನ್ ರೋಲ್ ಲಭ್ಯವಿಲ್ಲದ ಕಾರಣ, ಬೇಕರಿ ಸಿಬ್ಬಂದಿಯ ಸೂಚನೆಯಂತೆ ಪನೀರ್ ಟಿಕ್ಕಾ ರೋಲ್ ಖರೀದಿಸಿದರು. ಆದರೆ ಆ ರೋಲ್‌ನ ಮೊದಲ ತುತ್ತು ಸೇವಿಸುತ್ತಿದ್ದಂತೆಯೇ ಅವರಿಗೆ ಭಾರಿ ಆಘಾತ ಕಾದಿತ್ತು. ಪನೀರ್ ರೋಲ್ ಒಳಗೆ ಸತ್ತ ಹಲ್ಲಿಯೊಂದು ಪತ್ತೆಯಾಗಿದ್ದು ಇದನ್ನು ಕಂಡ ದೀಪು ಅವರು ತೀವ್ರ ಅಸಹ್ಯದಿಂದ ಸ್ಥಳದಲ್ಲೇ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡರು.
ಬೇಕರಿ ಸಿಬ್ಬಂದಿಯ ಬೇಜವಾಬ್ದಾರಿ ವರ್ತನೆ:
ಹಲ್ಲಿಯನ್ನು ಕಂಡು ಆಘಾತಕ್ಕೊಳಗಾದ ದೀಪು ಬೇಕರಿ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ಅವರು ಕ್ಷಮೆಯಾಚಿಸುವ ಬದಲು “ನಮ್ಮ ಬೇಕರಿ ತುಂಬಾ ಸ್ವಚ್ಛವಾಗಿದೆ” ಎಂದು ವಾಗ್ವಾದ ನಡೆಸಿದ್ದಾರೆ. ಅಸ್ವಸ್ಥಗೊಂಡು ವಾಂತಿ ಮಾಡಿದ ದೀಪು ಅವರನ್ನು ಕಾಮಾಕ್ಷಿಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಅತಿಸಾರ (Diarrhoea) ಕಾಣಿಸಿಕೊಂಡಿದ್ದು, 24 ಗಂಟೆಗಳ ಕಾಲ ಐಸಿಯುನಲ್ಲಿ ಇರಿಸಲಾಗಿತ್ತು. ಅಚ್ಚರಿಯೆಂದರೆ, ಆಸ್ಪತ್ರೆಗೆ ಕರೆತಂದ ಬೇಕರಿ ಸಿಬ್ಬಂದಿ ಬಿಲ್ ಪಾವತಿಸದೆ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ
ಪೊಲೀಸ್ ಕೇಸ್ ಮತ್ತು ತನಿಖೆ:
ಚೇತರಿಸಿಕೊಂಡ ದೀಪು ಈಗ ಗೋವಿಂದರಾಜನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಿಷಪೂರಿತ ಪದಾರ್ಥ ಬಡಿಸಿದ ಮತ್ತು ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಬೇಕರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಸಮಯದಲ್ಲಿ ದೀಪು ಭಯಭೀತರಾಗಿದ್ದರಿಂದ ಹಲ್ಲಿಯ ಫೋಟೋ ತೆಗೆಯಲು ಸಾಧ್ಯವಾಗಿಲ್ಲ, ಹೀಗಾಗಿ ಪೊಲೀಸರು ಈಗ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

