ಬೆಂಗಳೂರು: ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ(ಕೆಎಆರ್‌ಸಿ) ಗೃಹಬಳಕೆ ವಿದ್ಯುತ್ ದರ ಪರಿಷ್ಕರಿಸಿದೆ. ಬೆಸ್ಕಾಂ ಮತ್ತು ಸೆಸ್ಕ್ ವ್ಯಾಪ್ತಿಯಲ್ಲಿ ವಿದ್ಯುತ್ ದರ ಹೆಚ್ಚಿಸಲಾಗಿದ್ದು, ಉಳಿದಂತೆ ಮೆಸ್ಕಾಂ, ಜೆಸ್ಕಾಂ, ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ದರ ಇಳಿಕೆಯಾಗಿದೆ.
ಪರಿಷ್ಕೃತ ದರದ ಅನ್ವಯ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ವ್ಯಾಪ್ತಿಯಲ್ಲಿ ಗೃಹಬಳಕೆ ವಿದ್ಯುತ್ ಸಂಪರ್ಕಗಳ ವಿದ್ಯುತ್ ಬಿಲ್ ಪ್ರತಿ ಯೂನಿಟ್ ಗೆ 56 ಪೈಸೆ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ(ಸೆಸ್ಕ್) ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 15 ಪೈಸೆಯಷ್ಟು ಹೆಚ್ಚಳವಾಗಲಿದೆ.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ(ಮೆಸ್ಕಾಂ) ವ್ಯಾಪ್ತಿಯಲ್ಲಿ ಯೂನಿಟ್ ಗೆ 9 ಪೈಸೆ ಇಳಿಕೆಯಾಗಲಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ(ಹೆಸ್ಕಾಂ) ಮತ್ತು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ(ಜೆಸ್ಕಾಂ) ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 10 ಪೈಸೆಯಷ್ಟು ವಿದ್ಯುತ್ ದರ ಇಳಿಕೆಯಾಗಲಿದೆ.
2025ರ ಏಪ್ರಿಲ್ ನಿಂದ ಪರಿಷ್ಕೃತ ವಿದ್ಯುತ್ ದರ ಪೂರ್ವನ್ವಯವಾಗಲಿದೆ. ಮೇ ತಿಂಗಳಿನಿಂದ 2027ರ ಏಪ್ರಿಲ್ ವರೆಗೆ ಪ್ರತಿ ತಿಂಗಳ ಬಿಲ್ ನಲ್ಲಿ ಹೆಚ್ಚುವರಿ ದರದ ಬಾಕಿಯನ್ನು ಸಮಾನ ಕಂತುಗಳಲ್ಲಿ ಹೊಂದಾಣಿಕೆ ಮಾಡಲಾಗುವುದು. ರಾಜ್ಯದ ಐದು ವಿದ್ಯುತ್ ವಿತರಣಾ ಕಂಪನಿಗಳ ಪೈಕಿ ಬೆಸ್ಕಾಂ ಮತ್ತು ಸೆಸ್ಕ್ 2024- 25 ನೇ ಆರ್ಥಿಕ ವರ್ಷದಲ್ಲಿ ಆದಾಯ ಖೋತಾ ಆಗಿದ್ದವು. ಮತ್ತೊಂದೆಡೆ ಜೆಸ್ಕಾಂ, ಹೆಸ್ಕಾಂ ಮತ್ತು ಮೆಸ್ಕಾಂ ನಿಗದಿಗಿಂತ ಹೆಚ್ಚಿನ ಆದಾಯ ಗಳಿಸಿದ್ದವು.
ಆದಾಯ ಖೋತಾ ಆಗಿರುವುದರಿಂದ ವಿದ್ಯುತ್ ದರ ಹೆಚ್ಚಳ ಮೂಲಕ ಆರ್ಥಿಕ ನಷ್ಟ ಸರಿದೂಗಿಸುವಂತೆ ಬೆಸ್ಕಾಂ ಮತ್ತು ಸೆಸ್ಕ್ ನಿಂದ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆ ಒಪ್ಪಿರುವ ಕೆಎಆರ್‌ಸಿ 2024 -25 ನೇ ಸಾಲಿಗೆ ಪೂರ್ವಾನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಿಸಿ ಶುಕ್ರವಾರ ಆದೇಶ ಹೊರಡಿಸಿದೆ. ನಿಗದಿಗಿಂತ ಹೆಚ್ಚಿನ ಆದಾಯ ಗಳಿಸಿರುವ ಮೆಸ್ಕಾಂ, ಜೆಸ್ಕಾಂ, ಹೆಸ್ಕಾಂ ವ್ಯಾಪ್ತಿಯಲ್ಲಿ ದರ ಇಳಿಕೆ ಮಾಡಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 56 ಪೈಸೆ, ಸೆಸ್ಕ್ ವ್ಯಾಪ್ತಿಯಲ್ಲಿ 15 ಪೈಸೆ ಹೆಚ್ಚಳವಾಗಲಿದೆ. ಜೆಸ್ಕಾಂ ಮತ್ತು ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 10 ಪೈಸೆ, ಮೆಸ್ಕಾಂ ವ್ಯಾಪ್ತಿಯಲ್ಲಿ 9 ಪೈಸೆ ಇಳಿಕೆಯಾಗಲಿದೆ.

