ಚಿಕ್ಕಮಗಳೂರು: ನದಿ ದಡದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ದೋಣಿಗಂಡಿ ಬಳಿಯ ಹೇಮಾವತಿ ನದಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೋಣಿಗಂಡಿ ಬಳಿ ಈ ದುರಂತ ಸಂಭವಿಸಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಸಂತೋಷ್ (38) ಮೃತಪಟ್ಟಿದ್ದಾರೆ. ಪತಿ ಹಾಗೂ ಸಂಬಂಧಿಕರ ಜೊತೆ ನದಿಗೆ ಬಟ್ಟೆ ಒಗೆಯಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ಮೃತ ಸಂತೋಷ್ ಬೇಲೂರು ತಾಲೂಕಿನ ಚೀಕನಹಳ್ಳಿ ನಿವಾಸಿ. ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಲೈನ್ ಮೆನ್ ಆಗಿ ಕೆಲಸ ಮಾಡುತ್ತಿದ್ದರು. ನಾಲ್ಕು ದಿನಗಳ ಹಿಂದೆ ಲೈನ್ ಮೆನ್ ಕೆಲಸ ಬಿಟ್ಟಿದ್ದರು. ಪತ್ನಿಯ ಜೊತೆ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಪತ್ನಿಯೊಂದಿಗೆ ನದಿ ತೀರಕ್ಕೆ ಬಟ್ಟೆ ಒಗೆಯಲು ಹೋಗಿದ್ದಾರೆ. ಹೇಮಾವತಿ ನದಿಗೆ ಅಡ್ಡಲಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೆಸ್ಕಾಂ ಸಿಬ್ಬಂದಿಗಳು, ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

