ಬೆಂಗಳೂರು: ಹಲವಾರು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಬ್ಬರ ಜಗಳದಲ್ಲಿ ತಾನು ಮುಖ್ಯಮಂತ್ರಿ ಆಗಬಹುದೆಂಬ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ಜಗಳ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಇಬ್ಬರಲ್ಲ ಮೂವರು ಪೈಪೋಟಿಯಲ್ಲಿದ್ದಾರೆ. ಕಾಂಗ್ರೆಸ್ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಾಗಿದೆ. ಅಧಿಕಾರಕ್ಕಾಗಿ ಕಚ್ಚಾಟ ನಡೆಯುತ್ತಿದೆ. ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾಳೆಯೇ ವಿಧಾನಸಭೆ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ತರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಪೂರ್ಣಾವಧಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಧ್ಯಕ್ಷರಾಗಿ ಮುಂದುವರೆಯುತ್ತಾರೆಯೇ ಇಲ್ಲವೇ ಎನ್ನುವುದು ಇಂದಿನ ಸಭೆಯಲ್ಲಿ ನಿರ್ಧಾರವಾಗುವುದಿಲ್ಲ. ಅಧ್ಯಕ್ಷರ ಮೌಲ್ಯಮಾಪನವೂ ನಡೆಯುವುದಿಲ್ಲ. ಪಕ್ಷದಲ್ಲಿ ನಿರಂತರವಾಗಿ ಮೌಲ್ಯಮಾಪನ ನಡೆಯುತ್ತದೆ. ಅಧ್ಯಕ್ಷರು ಬದಲಾದರೆ ಸಹಜವಾಗಿ ಹೊಸತಂಡ ರಚಿಸಲಾಗುವುದು. ಹೊಸ ಅಧ್ಯಕ್ಷರು ಬಂದರೆ ಕೋರ್ ಕಮಿಟಿ ಬದಲಾಗುವುದಿಲ್ಲ. ರಾಜ್ಯದಲ್ಲಿ ಶಕ್ತಿಶಾಲಿ ಅಧ್ಯಕ್ಷರಿದ್ದಾರೆ. ಇದೇ ಅಧ್ಯಕ್ಷರ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ. ಅರ್ಜಿ ಸಲ್ಲಿಸಿ, ಸಂದರ್ಶನ ನಡೆಸಿ, ಹೆಸರು ಘೋಷಿಸಬೇಕೆಂದು ಹೇಳಲು ಅಧ್ಯಕ್ಷರ ಹುದ್ದೆ ಒಂದು ಉದ್ಯೋಗವಲ್ಲ ಎಂದು ರಾಧಾ ಮೋಹನ್ ದಾಸ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

