HomeIndiaಕೇಂದ್ರ ಚುನಾವಣಾ ಆಯೋಗದಲ್ಲಿಯೇ ಭುಗಿಲೆದ್ದ ಭಿನ್ನಾಭಿಪ್ರಾಯ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಿರ್ಧಾರಗಳಿಗೆ 14...

ಕೇಂದ್ರ ಚುನಾವಣಾ ಆಯೋಗದಲ್ಲಿಯೇ ಭುಗಿಲೆದ್ದ ಭಿನ್ನಾಭಿಪ್ರಾಯ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಿರ್ಧಾರಗಳಿಗೆ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ ಇಬ್ಬರು ಆಯುಕ್ತರು

ನವದೆಹಲಿ: ಕೇಂದ್ರ ಚುನಾವಣಾ ಆಯೋಗದಲ್ಲಿ ಆಂತರಿಕ ಕಲಹ ಆರಂಭವಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಹಲವು ಪ್ರಮುಖ ಪ್ರಕ್ರಿಯೆಗಳು ತಮ್ಮ ಗಮನಕ್ಕೆ ಬಾರದೆ ಅಥವಾ ಒಪ್ಪಿಗೆಯಿಲ್ಲದೆ ಏಕಪಕ್ಷೀಯವಾಗಿ ಕೈಗೊಂಡ ನಿರ್ಣಯಗಳಾಗಿವೆ ಎಂದು ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಇಬ್ಬರು ಆಯುಕ್ತರು ಕಳೆದ 10 ತಿಂಗಳಲ್ಲಿ 14 ಬಾರಿ ಅಧಿಕೃತವಾಗಿ ದಾಖಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿ ಹೊರಬಿದ್ದಿದೆ. ಕೇಂದ್ರ ಚುನಾವಣಾ ಆಯೋಗದಲ್ಲಿನ ಈ ಬೆಳವಣಿಗೆ ಭಾರಿ ಸಂಚಲನ ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸ ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್-6’ ನಲ್ಲಿ ಮಾಡಿದ ತಿದ್ದುಪಡಿಗಳನ್ನು ಇಬ್ಬರೂ ಆಯುಕ್ತರು “ಕಾನೂನುಬಾಹಿರ” ಮತ್ತು “ಅನಧಿಕೃತ” ಎಂದು ಕರೆದಿದ್ದಾರೆ. 1960 ರ ಮತದಾರರ ನೋಂದಣಿ ನಿಯಮಗಳಿಗೆ ತಿದ್ದುಪಡಿ ತರದೆ ಶಾಸನಬದ್ಧ ಫಾರ್ಮ್ ಅನ್ನು ಏಕಪಕ್ಷೀಯವಾಗಿ ಬದಲಾಯಿಸಲು ಬರುವುದಿಲ್ಲ ಎಂದು ವಾದಿಸಿದ್ದಾರೆ.

ಮತದಾರರ ದತ್ತಾಂಶವನ್ನು ಕೇಂದ್ರೀಕರಿಸುವುದು ಮತ್ತು ‘ECINet’ ಸಾಫ್ಟ್‌ವೇರ್ ಬಳಕೆಯ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಉದಾಹರಣೆಗೆ, ಗೋವಾದಲ್ಲಿ ಅರ್ಹರೆಂದು ಗುರುತಿಸಲಾಗಿದ್ದ 97 ಮತದಾರರ ಹೆಸರುಗಳನ್ನು ಕೇವಲ ಸಾಫ್ಟ್‌ವೇರ್ ದೋಷದಿಂದಾಗಿ ಅಂತಿಮ ಮತದಾರರ ಪಟ್ಟಿಗೆ ಸೇರಿಸಲು ಸಾಧ್ಯವಾಗಿಲ್ಲ ಎಂಬ ಗಂಭೀರ ಲೋಪ ಬೆಳಕಿಗೆ ಬಂದಿದೆ.

ಮತದಾರರ ಪಟ್ಟಿ ಪರಿಷ್ಕರಣೆ (SIR), ಹೆಸರುಗಳ ಅಳಿಸುವಿಕೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಮತದಾರರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ಅಧಿಕಾರದ ಬಗ್ಗೆಯೂ ಆಯುಕ್ತರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗದ ಆಂತರಿಕ ಮೂಲಗಳು, ಆಯೋಗದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆಯುಕ್ತರು ಕೇವಲ ಕೆಲ ನಿಯಮಾವಳಿಗಳ ಪರಿಶೀಲನೆಗಾಗಿ ಸಲಹೆ-ಅವಲೋಕನಗಳನ್ನು ದಾಖಲಿಸಿದ್ದಾರೆ ಅಷ್ಟೇ. ‘ಎಸ್‌ಐಆರ್’ ಸೇರಿದಂತೆ ಪ್ರತಿಯೊಂದು ಮಹತ್ವದ ನಿರ್ಧಾರಗಳು ಸಿಇಸಿ ಹಾಗೂ ಇಬ್ಬರು ಆಯುಕ್ತರ ಪೂರ್ಣ ಸಮ್ಮತಿ ಮತ್ತು ಸಹಿಯೊಂದಿಗೆ ಸರ್ವಾನುಮತದಿಂದಲೇ ಅಂಗೀಕಾರವಾಗಿವೆ. ನಿಯಮಗಳ ಪ್ರಕಾರ ಬಹುಮತದ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಸ್ಪಷ್ಟಪಡಿಸಿವೆ.

ದೆಹಲಿಯಲ್ಲಿ ಆಗಸ್ಟ್ 31 ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ 97 ಲಕ್ಷಕ್ಕೂ ಹೆಚ್ಚು ಮತದಾರರಿದ್ದು, ಈ ಪೈಕಿ ಬರೋಬ್ಬರಿ 33.13 ಲಕ್ಷ ಜನರಿಗೆ 2002 ರ ಹಳೆಯ ಎಸ್‌ಐಆರ್ ದಾಖಲೆಗಳೊಂದಿಗೆ ವಿವರ ಹೊಂದಿಕೆಯಾಗುತ್ತಿಲ್ಲ ಎಂದು ನೋಟಿಸ್ ಜಾರಿಗೊಳಿಸಲಾಗಿದೆ. ಆಘಾತಕಾರಿ ಸಂಗತಿಯೆಂದರೆ, ಈ ನೋಟಿಸ್ ಪಡೆದವರ ಪಟ್ಟಿಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಹಾಗೂ ಸ್ವತಃ ಚುನಾವಣಾ ಆಯುಕ್ತ ಎಸ್.ಎಸ್. ಸಂಧು ಅವರ ಹೆಸರುಗಳೂ ಸೇರಿವೆ.

ವರದಿ ಪ್ರಕಟವಾಗುತ್ತಿದ್ದಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರ ಮತ್ತು ಸಿಇಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಬಿಜೆಪಿಯ ಅನುಕೂಲಕ್ಕಾಗಿ ಮುಖ್ಯ ಚುನಾವಣಾ ಆಯುಕ್ತರು ಪ್ರಜಾಪ್ರಭುತ್ವದ ದೊಡ್ಡ ಅಪರಾಧ ಎಸಗುತ್ತಿದ್ದಾರೆ. ಇವರು ಆ ಹುದ್ದೆಯಲ್ಲಿರುವವರೆಗೆ ನಿಷ್ಪಕ್ಷಪಾತ ಚುನಾವಣೆ ಅಸಾಧ್ಯ ಎಂದು ಶಿವಸೇನೆಯ ಸಂಜಯ್ ರಾವತ್ ಕಿಡಿಕಾರಿದ್ದಾರೆ.

ಸಂಸತ್ತಿನಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೋಷಾರೋಪಣೆ ನಿರ್ಣಯ ಮಂಡಿಸಿ ತಕ್ಷಣವೇ ಪದಚ್ಯುತಗೊಳಿಸಬೇಕೆಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಮತ್ತು ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಆಗ್ರಹಿಸಿದ್ದಾರೆ.

ಅಧಿಕಾರದಲ್ಲಿರುವವರ ಕೈಗೊಂಬೆಯಾಗಿ ಸಾಂವಿಧಾನಿಕ ಸಂಸ್ಥೆಗಳು ನಡೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಬಹುದೊಡ್ಡ ದ್ರೋಹ ಎಂದು ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2023ರ ಡಿಸೆಂಬರ್‌ನಲ್ಲಿ ಜಾರಿಗೆ ಬಂದ ಹೊಸ ಕಾಯ್ದೆಯನ್ವಯ ಮುಖ್ಯ ನ್ಯಾಯಮೂರ್ತಿಗಳನ್ನು (CJI) ಹೊರಗಿಟ್ಟು, ಪ್ರಧಾನಿ, ಕೇಂದ್ರ ಸಚಿವರು ಮತ್ತು ವಿಪಕ್ಷ ನಾಯಕರನ್ನೊಳಗೊಂಡ ತ್ರಿಸದಸ್ಯ ಸಮಿತಿಯು ಜ್ಞಾನೇಶ್ ಕುಮಾರ್ ಮತ್ತು ಸಂಧು ಅವರನ್ನು ನೇಮಕ ಮಾಡಿತ್ತು. ಈ ನೇಮಕಾತಿ ಪ್ರಕ್ರಿಯೆಯೇ ಪಾರದರ್ಶಕವಾಗಿಲ್ಲ ಎಂದು ವಿಪಕ್ಷಗಳು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular