ನವದೆಹಲಿ: ಮೊಟ್ಟೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎನ್ನುವ ವರದಿಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ತಳ್ಳಿ ಹಾಕಿದೆ. ದೇಶದಲ್ಲಿ ಲಭ್ಯವಿರುವ ಮೊಟ್ಟೆಗಳು ಸೇವನೆಗೆ ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದೆ.
ಮೊಟ್ಟೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎನ್ನುವ ವರದಿಗಳು ವೈಜ್ಞಾನಿಕವಾಗಿ ಆಧಾರ ರಹಿತ ಮತ್ತು ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಉಂಟು ಮಾಡುತ್ತವೆ. ಅಂತಹ ವರದಿಗಳನ್ನು ನಂಬದಂತೆ ಪ್ರಾಧಿಕಾರ ಸೂಚನೆ ನೀಡಿದೆ.
ದೇಶದಲ್ಲಿ ಮಾರಾಟವಾಗುವ ಮೊಟ್ಟೆಗಳಲ್ಲಿ ಎಒಝಡ್(ನೈಟ್ರೋಪ್ಯೂರಾನ್ ಮೆಟಾಬೊಲೈಟ್ಸ್) ಇರುತ್ತದೆ. ಇದು ಕ್ಯಾನ್ಸರ್ ಕಾರಕ ಅಂಶ ಎಂದು ಕೆಲವು ಮಾಧ್ಯಮಗಳು ಮತ್ತು ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಮೊಟ್ಟೆ ಸೇವನೆ ಬಗ್ಗೆ ಆತಂಕ ಮೂಡಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ಆಹಾರ ಸುರಕ್ಷತೆ ಮತ್ತು ಮಾನದಂಡ(ಮಾಲಿನ್ಯಕಾರಕಗಳು, ವಿಷ ಮತ್ತು ಅವಶೇಷಗಳು) ನಿಯಮಗಳು 2011 ಅಡಿಯಲ್ಲಿ ಕೋಳಿ ಸಾಕಾಣಿಕೆ, ಮೊಟ್ಟೆ ಉತ್ಪಾದನೆಯ ಎಲ್ಲಾ ಹಂತಗಳಲ್ಲಿ ನೈಟ್ರೋಪ್ಯೂರಾನ್ ಬಳಕೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೀಗಾಗಿ ಈ ಅಂಶ ಇರುವುದಿಲ್ಲ. ಗ್ರಾಹಕರು ಯಾವುದೇ ಆತಂಕವಿಲ್ಲದೆ ನಿರಾತಂಕವಾಗಿ ಮೊಟ್ಟೆ ತಿನ್ನಬಹುದು ಎಂದು ಹೇಳಲಾಗಿದೆ.

